ADVERTISEMENT

ಬಹುಸಂಸ್ಕೃತಿಯ ಭಾರತದಲ್ಲಿ ಬೌದ್ಧ ಧರ್ಮ ಅವಶ್ಯಕ

ಹೊರವಲಯದ ಗೆದ್ದಲಹಳ್ಳಿ ಗೂಳಹರಿವೆ ರಸ್ತೆಯ ಬುದ್ಧದಮ್ಮ ಪ್ರತಿಷ್ಠಾನದಲ್ಲಿ ಆಯೋಜಿಸಿದ್ಧ ಬುದ್ಧರ ಜಯಂತಿಯಲ್ಲಿ ಆನಂದ ಬಂತೇಜಿ

​ಪ್ರಜಾವಾಣಿ ವಾರ್ತೆ
Published 13 ಮೇ 2019, 20:31 IST
Last Updated 13 ಮೇ 2019, 20:31 IST
ಬುದ್ಧಧಮ್ಮ ಪ್ರತಿಷ್ಠಾನದಲ್ಲಿ ಭಗವಾನ್ ಬುದ್ಧ ಜಯಂತಿ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಬೋಧಿ ಸಪ್ತಾಹದಲ್ಲಿ ಮಹಾಬೋಧಿ ಸೊಸೈಟಿ ಕಾರ್ಯದರ್ಶಿಗಳಾದ ಆನಂದ ಬಂತೇಜಿ ನೇತೃತ್ವದಲ್ಲಿ 50 ಬಂತೇಜಿ, ಉಪಾಸಕರು ಪ್ರಾರ್ಥಿಸಿದರು
ಬುದ್ಧಧಮ್ಮ ಪ್ರತಿಷ್ಠಾನದಲ್ಲಿ ಭಗವಾನ್ ಬುದ್ಧ ಜಯಂತಿ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಬೋಧಿ ಸಪ್ತಾಹದಲ್ಲಿ ಮಹಾಬೋಧಿ ಸೊಸೈಟಿ ಕಾರ್ಯದರ್ಶಿಗಳಾದ ಆನಂದ ಬಂತೇಜಿ ನೇತೃತ್ವದಲ್ಲಿ 50 ಬಂತೇಜಿ, ಉಪಾಸಕರು ಪ್ರಾರ್ಥಿಸಿದರು   

ತುಮಕೂರು: ‘ಬಹು ಸಂಸ್ಕೃತಿ, ಬಹುಧರ್ಮವನ್ನು ಹೊಂದಿರುವ ಭಾರತದಲ್ಲಿ ಬೌದ್ಧ ಧರ್ಮದ ಅವಶ್ಯಕತೆ ಹೆಚ್ಚಾಗಿದೆ’ ಎಂದುಮಹಾಬೋಧಿ ಸೊಸೈಟಿ ಕಾರ್ಯದರ್ಶಿಗಳಾದ ಆನಂದ ಬಂತೇಜಿ ಅಭಿಪ್ರಾಯಪಟ್ಟರು.

ಸೋಮವಾರ ನಗರದ ಹೊರವಲಯದ ಗೆದ್ದಲಹಳ್ಳಿ ಗೂಳಹರಿವೆ ರಸ್ತೆಯ ಬುದ್ಧದಮ್ಮ ಪ್ರತಿಷ್ಠಾನದಲ್ಲಿ ಆಯೋಜಿಸಿದ್ದ ಭಗವಾನ್ ಬುದ್ಧರ 2563ನೇ ಜಯಂತಿ ಪ್ರಯುಕ್ತ ಆಯೋಜಿಸಿದ್ಧ ಬೋಧಿ ಸಪ್ತಾಹ ಉದ್ಘಾಟಿಸಿದರು.

ಧರ್ಮವನ್ನು ಮೀರಿದ ಸಂದೇಶವನ್ನು ಭಾರತದಲ್ಲಿ ಬೌದ್ಧ ಧಮ್ಮ ನೀಡುತ್ತಿದೆ’ ಎಂದು ಹೇಳಿದರು.

ADVERTISEMENT

‘ಜಗತ್ತಿನಲ್ಲಿ ರಕ್ತಪಾತವಿಲ್ಲದೇ ಧರ್ಮವನ್ನು ಪಸರಿಸಿದ್ದು, ಬೌದ್ಧ ಧರ್ಮ ಮಾತ್ರ. ಅನೇಕ ದೇಶಗಳಲ್ಲಿ ಜನರು ತಾವಾಗಿಯೇ ಬುದ್ಧ ಧರ್ಮ ಒಪ್ಪಿಕೊಂಡಿದ್ದಾರೆ. ಮೌಲ್ಯವನ್ನು ಕಳೆದುಕೊಂಡಿರುವ ಜಗತ್ತಿಗೆ ಬುದ್ಧನ ನೈತಿಕ ಮೌಲ್ಯಗಳು ದಾರಿದೀಪವಾಗಲಿದ್ದು, ಬುದ್ಧನ ಮೌಲ್ಯಗಳನ್ನು ಪ್ರಚಾರಪಡಿಸಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ತಿಳಿಸಿದರು.

‘ಭಾರತದಲ್ಲಿ ಬೌದ್ಧ ಧರ್ಮ ನಶಿಸಿದ ನಂತರ ಅಹಿಂಸೆ ಹೆಚ್ಚಾಗಿದೆ. ಜಾತಿ ತಾರತಮ್ಯ, ಶೋಷಣೆಯೇ ಅಹಿಂಸೆ ಹೆಚ್ಚಳವಾಗಲು ಕಾರಣವಾಗಿದೆ. ಬುದ್ಧ ದಮ್ಮಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹಿಂದೆ ನಳಂದ ಮತ್ತು ತಕ್ಷಶಿಲಾ ವಿಶ್ವವಿದ್ಯಾಲಯಗಳಲ್ಲಿ ಅರ್ಥಶಾಸ್ತ್ರ, ವೈದ್ಯಕೀಯ ಶಾಸ್ತ್ರ ಸೇರಿದಂತೆ ಎಲ್ಲ ವಿಭಾಗಗಳಲ್ಲಿಯೂ ಬುದ್ಧನ ಧಮ್ಮವನ್ನು ಅಳವಡಿಸಲಾಗಿತ್ತು ಅದರಿಂದ ಭಾರತದಲ್ಲಿ ಶಾಂತಿ ನೆಲೆಸಿತ್ತು’ ಎಂದು ಅಭಿಪ್ರಾಯಪಟ್ಟರು.

ಬುದ್ಧ ಧಮ್ಮ ಪ್ರತಿಷ್ಠಾನದ ಅಧ್ಯಕ್ಷ ಬಿ.ಪಿ.ಹನುಮಂತರಾಯಪ್ಪ ಮಾತನಾಡಿ, ‘ಭಗವಾನ್ ಬುದ್ಧನ ಜನ್ಮಜಯಂತಿಗೂ ಮುಂಚೆಯೇ ಬೌದ್ಧ ರಾಷ್ಟ್ರಗಳಲ್ಲಿ ಬುದ್ಧನ ತತ್ವಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಾಪ್ತಾಹಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ’ ಎಂದು ಹೇಳಿದರು.

‘ತುಮಕೂರು ನಗರದಲ್ಲಿಯೂ ಬುದ್ಧನ ವಿಚಾರಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬುದ್ಧ ಜಯಂತಿಯ ಅಂಗವಾಗಿ ಸಪ್ತಾಹವನ್ನು ಆಯೋಜಿಲಾಗಿದೆ’ ಎಂದು ಹೇಳಿದರು.

‘ಬುದ್ಧನಿಗೆ ಶರಣಾಗುವುದರಿಂದ ನಮ್ಮಲ್ಲಿನ ಕಲ್ಮಶಗಳನ್ನು ಕಳೆದುಕೊಳ್ಳಬಹುದಾಗಿದೆ. ಬುದ್ಧ ಎಲ್ಲ ಪಾಪಗಳಿಂದ ದೂರವಿದ್ದು, ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ನಮ್ಮ ಚಿತ್ತವನ್ನು ಪರಿಶುದ್ಧಗೊಳಿಸಿಕೊಳ್ಳುವಂತೆ ಉಪದೇಶ ನೀಡಿದ್ದಾರೆ. ಇಂತಹ ಉಪದೇಶ, ಸಂದೇಶಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿದೆ’ ಎಂದು ತಿಳಿಸಿದರು.

ಕಾರ್ಯದರ್ಶಿ ವಾಸುದೇವ್, ನಿರ್ದೇಶಕರಾದ ನಾಗರಾಜ್, ಶ್ರೀನಿವಾಸಪ್ಪ, ಸಂಜೀವಯ್ಯ, ಬೌದ್ಧ ಧರ್ಮದ ಉಪಾಸಕ, ಉಪಾಸಕಿಯರು, 50 ಬಂತೇಜಿಗಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.