ADVERTISEMENT

ದಸರೆ, ಸಾಲು ರಜೆಗಳ ಮುಕ್ತಾಯ: ತುಮಕೂರಿನಲ್ಲಿ ಬೆಂಗಳೂರು ಬಸ್‌ಗೆ ನೂಕುನುಗ್ಗಲು

ಅನಿರೀಕ್ಷಿತವಾಗಿ ಹೆಚ್ಚಾದ ಪ್ರಯಾಣಿಕರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 15:46 IST
Last Updated 21 ಅಕ್ಟೋಬರ್ 2018, 15:46 IST
ತುಮಕೂರು ಕೇಂದ್ರ ಬಸ್ ನಿಲ್ದಾಣದ ಬೆಂಗಳೂರು ರೂಟ್‌ನಲ್ಲಿ ಭಾನುವಾರ ರಾತ್ರಿ ಬೆಂಗಳೂರು ಬಸ್ ಹತ್ತಲು ಪ್ರಯಾಣಿಕರ ನೂಕುನುಗ್ಗಲು ಕಂಡು ಬಂದಿತು
ತುಮಕೂರು ಕೇಂದ್ರ ಬಸ್ ನಿಲ್ದಾಣದ ಬೆಂಗಳೂರು ರೂಟ್‌ನಲ್ಲಿ ಭಾನುವಾರ ರಾತ್ರಿ ಬೆಂಗಳೂರು ಬಸ್ ಹತ್ತಲು ಪ್ರಯಾಣಿಕರ ನೂಕುನುಗ್ಗಲು ಕಂಡು ಬಂದಿತು   

ತುಮಕೂರು: ದಸರಾ ಹಬ್ಬದ ಸಂಭ್ರಮ, ಸತತ ಐದು ದಿನ ರಜೆಯ ಮಜಾ ಅನುಭವಿಸಿದ ಜಿಲ್ಲೆಯ ವಿವಿಧ ಭಾಗದ ಜನರು ಬೆಂಗಳೂರಿಗೆ ಮತ್ತೆ ತೆರಳಲು ಭಾನುವಾರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪರದಾಡಿದರು.

ಸಂಜೆ ನಗರದ ಕೇಂದ್ರ ಬಸ್ ನಿಲ್ದಾಣದ ಬೆಂಗಳೂರು ರೂಟ್‌ನಲ್ಲಿ ನಾಲ್ಕೈದು ತಾಸು ಪ್ರಯಾಣಿಕರ ನೂಕುನುಗ್ಗಲು ಕಂಡು ಬಂದಿತು.

ವ್ಯಾಪಾರ, ನೌಕರಿ ಹೀಗೆ ವಿವಿಧ ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ಮನೆ ಮಾಡಿ ವಾಸಿಸುತ್ತಿರುವವರು ಕುಟುಂಬ ಸಮೇತ ದಸರಾ ಹಬ್ಬಕ್ಕೆ ಬಂದು ಹಿಂತಿರುಗುತ್ತಿರುವುದರಿಂದ ನೂಕುನುಗ್ಗಲು ಹೆಚ್ಚಾಗಿತ್ತು.

ADVERTISEMENT

ಸೋಮವಾರ ಬೆಳಿಗ್ಗೆ ಬೇಗ ವ್ಯಾಪಾರಕ್ಕೆ, ನೌಕರಿಗೆ ಹೋಗಬೇಕಾಗಿರುವುದರಿಂದ ಭಾನುವಾರ ಸಂಜೆಯೇ ಬೆಂಗಳೂರಿಗೆ ಹೋಗಲು ಏಕಕಾಲಕ್ಕೆ ಬಂದಿದ್ದರಿಂದ ನೂಕುನುಗ್ಗಲಿತ್ತು.

ಸಾಮಾನ್ಯವಾಗಿ ಭಾನುವಾರ ಭಣಗುಡುತ್ತಿದ್ದ ಬಸ್ ನಿಲ್ದಾಣ ಈ ಭಾನುವಾರ ಪ್ರಯಾಣಿಕರಿಂದ ತುಂಬು ತುಳುಕಿತು. ಕೆಎಸ್‌ಆರ್‌ಟಿಸಿ ಸಾರಿಗೆ ನಿಯಂತ್ರಕರು, ಚಾಲಕರು, ನಿರ್ವಾಹಕರೊಂದಿಗೆ ವಾಗ್ವಾದ ನಡೆದವು. ಸಾಲಾಗಿ ನಿಂತು ಬಸ್ ಹತ್ತಲು ವ್ಯವಸ್ಥೆ ಮಾಡಿದರೂ ಸಹ ನುಗ್ಗಿ ಬಂದು ಬಸ್ ಹತ್ತುವುದು ಕಂಡು ಬಂದಿತು.

ಬೇಗ ಬಸ್ ತರಿಸಿ. ನಾವು ಬೆಂಗಳೂರಿಗೆ ಹೋಗುವುದು ಹೇಗೆ? ಎಷ್ಟು ಕಾದು ನಾವು ನಿಲ್ಲಬೇಕು? ಬೆಂಗಳೂರಿಗೆ ಬಸ್ ಇಲ್ಲ ಎಂದರೆ ಹೇಗೆ? ಹೀಗೆ ಹತ್ತಾರು ರೀತಿಯಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಪ್ರಯಾಣಿಕರು ಮುಗಿಬಿದ್ದು ಪ್ರಶ್ನಿಸಿದರು.

ಪ್ರಯಾಣಿಕರ ಸಂದಣಿ ನೋಡಿಕೊಂಡು ಅಧಿಕಾರಿಗಳು ಕೇಂದ್ರ ಬಸ್ ನಿಲ್ದಾಣಕ್ಕೆ ಬಸ್‌ಗಳನ್ನು ತರಿಸಿಕೊಂಡು ಕಳುಹಿಸುವ ವ್ಯವಸ್ಥೆ ಮಾಡಿದರು. ರಾತ್ರಿ 9 ಗಂಟೆಯವರೆಗೂ ಬಸ್ ತರಿಸಿ ಕಳುಹಿಸುವ ವ್ಯವಸ್ಥೆ ಮಾಡುತ್ತಲೇ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.