ADVERTISEMENT

ಗುತ್ತಿಗೆದಾರನ ಮೇಲೆ ಹಲ್ಲೆ ಆರೋಪ: ಗುಬ್ಬಿ ಶಾಸಕ ಶ್ರೀನಿವಾಸ್‌ ವಿರುದ್ಧ ಪ್ರಕರಣ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2024, 16:25 IST
Last Updated 16 ಮಾರ್ಚ್ 2024, 16:25 IST
ಎಸ್.ಆರ್.ಶ್ರೀನಿವಾಸ್ (ಕಾಂಗ್ರೆಸ್), ಗುಬ್ಬಿ
ಎಸ್.ಆರ್.ಶ್ರೀನಿವಾಸ್ (ಕಾಂಗ್ರೆಸ್), ಗುಬ್ಬಿ   

ತುಮಕೂರು: ಗುತ್ತಿಗೆದಾರ ಹಾಗೂ ಕಾಂಗ್ರೆಸ್‌ ಮುಖಂಡ ರಾಯಸಂದ್ರ ರವಿಕುಮಾರ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಮೇರೆಗೆ ಗುಬ್ಬಿ ಕಾಂಗ್ರೆಸ್‌ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ ಎಸ್‌.ಆರ್‌.ಶ್ರೀನಿವಾಸ್‌ ವಿರುದ್ಧ ಶನಿವಾರ ಪ್ರಕರಣ ದಾಖಲಾಗಿದೆ.

ಐಪಿಸಿ ಕಲಂ 506 (ಪ್ರಾಣ ಬೆದರಿಕೆ), 363 (ಅಪಹರಣ) ಹಾಗೂ ಇತರ ಕಲಂ ಅಡಿ ನಗರದ ತಿಲಕ್‌ಪಾರ್ಕ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

‘ಟೆಂಡರ್‌ನಲ್ಲಿ ಅನ್ಯಾಯವಾಗಿದೆ ಎಂದು ನಗರದ ಲೋಕೋಪಯೋಗಿ ಇಲಾಖೆಯ ಕಚೇರಿ ಮುಂಭಾಗ ಮಾರ್ಚ್‌ 14ರಂದು ರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದೆ. ರಾತ್ರಿ 10.30ಕ್ಕೆ ಸ್ಥಳಕ್ಕೆ ಬಂದ ಶ್ರೀನಿವಾಸ್‌ ಮತ್ತು ಬೆಂಬಲಿಗರು ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ರವಿಕುಮಾರ್‌ ದೂರು ನೀಡಿದ್ದಾರೆ. ದೂರಿನ ಮೇರೆಗೆ ಶ್ರೀನಿವಾಸ್‌ ಹಾಗೂ ಇತರ ಹತ್ತು ಜನರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ADVERTISEMENT

‘ಗುಬ್ಬಿ, ತಿಪಟೂರು ತಾಲ್ಲೂಕಿನ ಗಣಿ ಬಾಧಿತ ಪ್ರದೇಶಗಳ ಅಭಿವೃದ್ಧಿಗೆ ಮೂಲಸೌಕರ್ಯ ಕಲ್ಪಿಸಲು ಪಂಚಾಯತ್‌ ರಾಜ್‌ ವಿಭಾಗದಿಂದ ಟೆಂಡರ್‌ ಕರೆದಿದ್ದರು. ನಾನು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಾಂತ್ರಿಕ, ಆರ್ಥಿಕ ಬಿಡ್‌ನಲ್ಲಿ ಅರ್ಹತೆ ಪಡೆದಿದ್ದೆ. ನಂತರ ಅನುಮೋದನೆ ಮಾಡುವಾಗ ನನಗೆ ಟೆಂಡರ್‌ ತಪ್ಪಿಸಿದ್ದಾರೆ. ಇದನ್ನು ವಿರೋಧಿಸಿ ಧರಣಿ ನಡೆಸುತ್ತಿದ್ದ ಸಮಯದಲ್ಲಿ ಶ್ರೀನಿವಾಸ್‌ ತಮ್ಮ ಬೆಂಬಲಿಗರೊಂದಿಗೆ ಬಂದು ಹಲ್ಲೆ ನಡೆಸಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಘಟನೆ ನಡೆದ 24 ತಾಸಿನ ನಂತರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶನಿವಾರ ಮಧ್ಯಾಹ್ನ 3 ಗಂಟೆಯಿಂದ ತಿಲಕ್‌ ಪಾರ್ಕ್‌ ಠಾಣೆಯಲ್ಲಿ ಕುಳಿತಿದ್ದೆ. ರಾತ್ರಿ 8.30ಕ್ಕೆ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ನಿಸ್ಪಕ್ಷಪಾತವಾಗಿ ತನಿಖೆ ನಡೆಸಬೇಕು’ ಎಂದು ರವಿಕುಮಾರ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.