
FIR
ಕುಣಿಗಲ್: ದೇವಸ್ಥಾನದಲ್ಲಿ ಪೂಜೆ ಮಾಡಿಸಲು ಹೋದ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯನ್ನು ದೇವಸ್ಥಾನದ ಅರ್ಚಕ ಮತ್ತಿತರರು ಸೇರಿ ಜಾತಿ ಹಿಡಿದು ನಿಂದಿಸಿ, ಹಲ್ಲೆ ನಡೆಸಿ ದೇವಸ್ಥಾನದಿಂದ ಹೊರದಬ್ಬಿರುವ ಘಟನೆ ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಮಾಗಡಿ ರಸ್ತೆಯ ಅಂದ್ರಳ್ಳಿಯಲ್ಲಿ ವಾಸವಾಗಿರುವ ಪರಿಶಿಷ್ಟ ಜಾತಿ ಆದಿ ಕರ್ನಾಟಕ ಜನಾಂಗಕ್ಕೆ ಸೇರಿದ ರೋಜಾ ಅವರು ತಾಲ್ಲೂಕಿನ ಯಡಿಯೂರು ಹೋಬಳಿ ತಿಗಳರಪಾಳ್ಯ ಗ್ರಾಮದಲ್ಲಿರುವ ತನ್ನ ತಾಯಿ ಮನೆಗೆ ಮಾರಮ್ಮ ದೇವಿ ಹಬ್ಬಕ್ಕೆಂದು ಬಂದಿದ್ದರು.
ಸೋಮವಾರ ರಾತ್ರಿ ಗ್ರಾಮದಲ್ಲಿರುವ ವೆಂಕಟರಮಣ ಮೂಡಲಗಿರಿ ದೇವಾಲಯಕ್ಕೆ ತನ್ನ ತಾಯಿ ಮತ್ತು ತಂಗಿಯನ್ನು ಕರೆದುಕೊಂಡು ಹೋಗಿದ್ದಾರೆ.
ದೇವಸ್ಥಾನದ ಒಳಗಡೆ ಹೋದಾಗ ಅರ್ಚಕ ಹನುಮಯ್ಯ, ಗ್ರಾಮದ ಮಹಿಳೆ ಜಯಲಕ್ಷ್ಮಮ್ಮ, ಶ್ರೀನಿವಾಸ್ ಹಾಗೂ ಹದಿನಾರು ಮಂದಿ ಸೇರಿಕೊಂಡು, ‘ನೀನು ಕೀಳು ಜಾತಿಯವಳು. ದೇವಸ್ಥಾನದ ಒಳಗೆ ಬರಬಾರದು’ ಎಂದು ಜಾತಿ ಹಿಡಿದು ನಿಂದಿಸಿ, ಗಲಾಟೆ ಮಾಡಿ ತಲೆಯ ಕೂದಲನ್ನು ಹಿಡಿದು ಎಳೆದಾಡಿ ದೇವಸ್ಥಾನದಿಂದ ಹೊರಗೆ ತಳ್ಳಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ.
ಈ ಸಂಬಂಧ ಮಂಗಳವಾರ ಮಹಿಳೆ ಅಮೃತೂರು ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಅರ್ಚಕನನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.