ತುಮಕೂರಿನಲ್ಲಿ ಶುಕ್ರವಾರ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಸಂಬಂಧ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸ್ವಾಗತಿಸಿದ ಸಮುದಾಯದ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದರು.
ತುಮಕೂರು: ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಜಾರಿ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸ್ವಾಗತಿಸಿದ ಸಮುದಾಯದ ಮುಖಂಡರು, ನಗರದಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.
ಮಾದಿಗ ದಂಡೋರ ಸಮಿತಿ, ಬಿಜೆಪಿ ಎಸ್.ಸಿ ಮೋರ್ಚಾ ಸೇರಿ ವಿವಿಧ ಸಂಘಟನೆಗಳ ಮುಖಂಡರು ಘೋಷಣೆ ಕೂಗಿ ಪಟಾಕಿ ಸಿಡಿಸಿದರು.
‘ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ನಡೆಯುತ್ತಿತ್ತು. ಸುಪ್ರೀಂ ಕೋರ್ಟ್ ಐತಿಹಾಸಿಕ, ಮಹತ್ವದ ತೀರ್ಪು ನೀಡಿದೆ. ಇದರಿಂದ ಮಾದಿಗ ಸಮುದಾಯ ಸೇರಿದಂತೆ ಅದರ ಉಪ ಜಾತಿಗಳಿಗೆ ಅನುಕೂಲವಾಗಲಿದೆ. ಇದು ಹಲವರ ಹೋರಾಟಕ್ಕೆ ಸಂದ ಜಯವಾಗಿದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ, ಮಾದಿಗ ಸಮುದಾಯದ ಮುಖಂಡ ವೈ.ಎಚ್.ಹುಚ್ಚಯ್ಯ ಹೇಳಿದರು.
ಮಾದಿಗ ದಂಡೋರ ರಾಜ್ಯ ಘಟಕದ ಅಧ್ಯಕ್ಷ ಪಾವಗಡ ಶ್ರೀರಾಮ್, ‘ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ಕಾನೂನು ಹೋರಾಟ ಮಾಡದೆ, ಸುಪ್ರೀಂ ಕೋರ್ಟ್ ಆದೇಶದಂತೆ ಒಳ ಮೀಸಲಾತಿ ವರ್ಗೀಕರಣಕ್ಕೆ ಮುಂದಾಗಬೇಕು. ಸುಖಾ-ಸುಮ್ಮನೆ ಕಾಲಹರಣ ಮಾಡುವುದನ್ನು ಸಮುದಾಯದ ಜನ ಸಹಿಸುವುದಿಲ್ಲ. ಕೋರ್ಟ್ ತೀರ್ಪು ಯಥಾವತ್ತಾಗಿ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
ವಕೀಲ ಜೆ.ಸಿ.ರಂಗಧಾಮಯ್ಯ, ಮುಖಂಡರಾದ ಕೆಂಪರಾಜು, ನರಸೀಯಪ್ಪ, ಒಳಕಲ್ ಆಂಜಿನಪ್ಪ, ಸುರೇಶ್, ಗುಲಗಂಜಿಹಳ್ಳಿ ರಮೇಶ್, ಪಾಪಣ್ಣ, ಸೋರೆಕುಂಟೆ ಯೋಗೇಶ್ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.