ADVERTISEMENT

ಸಿಸೇರಿಯನ್ ಹೆರಿಗೆ: ಖಾಸಗಿ ಆಸ್ಪತ್ರೆಗಳ ವಿರುದ್ಧ ಕ್ರಮಕ್ಕೆ ಪರಮೇಶ್ವರ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2025, 6:40 IST
Last Updated 25 ಜೂನ್ 2025, 6:40 IST
ತುಮಕೂರಿನಲ್ಲಿ ಮಂಗಳವಾರ ಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್ ಉಪಸ್ಥಿತರಿದ್ದರು
ತುಮಕೂರಿನಲ್ಲಿ ಮಂಗಳವಾರ ಸಚಿವ ಜಿ.ಪರಮೇಶ್ವರ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್ ಉಪಸ್ಥಿತರಿದ್ದರು   

ತುಮಕೂರು: ಹಣ ವಸೂಲಿಗಾಗಿ ಅನಗತ್ಯವಾಗಿ ಸಿಸೇರಿಯನ್ ಹೆರಿಗೆ ಮಾಡಿಸುವ ಖಾಸಗಿ ಆಸ್ಪತ್ರೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಇಲಾಖೆ ಕಾರ್ಯವೈಖರಿಗೆ ಅತೃಪ್ತಿ ವ್ಯಕ್ತಪಡಿಸಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇ 80ರಷ್ಟು, ಸರ್ಕಾರಿ ಆಸ್ಪತ್ರೆಗಳಲ್ಲಿ ಶೇ 58ರಷ್ಟು ಸಿಸೇರಿಯನ್ ಹೆರಿಗೆ ಮಾಡಿಸುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇಷ್ಟೆಲ್ಲ ನಡೆಯುತ್ತಿದ್ದರೂ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ADVERTISEMENT

ರಾಜ್ಯದಲ್ಲಿ ಅತಿ ಹೆಚ್ಚು ಸಿಸೇರಿಯನ್ ಹೆರಿಗೆಗಳು ಜಿಲ್ಲೆಯಲ್ಲಿ ಆಗುತ್ತಿವೆ. ಒಂದು ಸಿಸೇರಿಯನ್ ಹೆರಿಗೆ ಮಾಡಿಸಲು ಬಡವರಿಂದ ₹1.50 ಲಕ್ಷದ ವರೆಗೂ ವಸೂಲಿ ಮಾಡುತ್ತಿರುವ ದೂರುಗಳು ಬಂದಿವೆ. ನನಗೆ ನೀವು ಕಥೆ ಹೇಳಬೇಡಿ. ಬಡವರ ಶೋಷಣೆ ತಪ್ಪಿಸಲು ಏನು ಮಾಡಿದ್ದೀರಿ? ಯಾವ ಕ್ರಮ ಕೈಗೊಂಡಿದ್ದೀರಿ? ಎಷ್ಟು ಆಸ್ಪತ್ರೆಗಳನ್ನು ಮುಚ್ಚಿಸಿದ್ದೀರಿ? ಎಂದರು.

ಸಮಜಾಯಿಸಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್, ‘ಅಂತಹ ಆಸ್ಪತ್ರೆಗಳಿಗೆ ನೋಟಿಸ್ ನೀಡಿ ಎಚ್ಚರಿಕೆ ಕೊಡಲಾಗಿದೆ’ ಎಂದರು. ಇದಕ್ಕೆ ಅತೃಪ್ತಿ ವ್ಯಕ್ತಪಡಿಸಿದ ಸಚಿವರು, ‘ನೋಟಿಸ್ ಕೊಟ್ಟರೆ ಹರಿದು ಬಿಸಾಕುತ್ತಾರೆ. ಇದರಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಮೊದಲು ಅಂತಹ ಆಸ್ಪತ್ರೆಗಳನ್ನು ಮುಚ್ಚಿಸಬೇಕು. ಈ ಬಗ್ಗೆ ಮುಂದಿನ ಸಭೆಗೆ ತಿಳಿಸಬೇಕು’ ಎಂದು ಸೂಚಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲೂ ಅದೇ ಪರಿಸ್ಥಿತಿ ಇದ್ದು, ಅಂತಹ ವೈದ್ಯರ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಬಡ ರೋಗಿಗಳಿಂದ ಎಷ್ಟೆಲ್ಲ ವಸೂಲಿ ಮಾಡುತ್ತಿದ್ದಾರೆ ಎಂಬ ಲೆಕ್ಕ ಕೊಡಲೇ? ತಾಲ್ಲೂಕು ವೈದ್ಯಾಧಿಕಾರಿಗಳು ಸೋಮಾರಿಗಳಾಗಿದ್ದು, ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ. ಹೆಚ್ಚು ವರ್ಷಗಳಿಂದ ಒಂದೇ ಕಡೆ ಇರುವ ತಾಲ್ಲೂಕು ವೈದ್ಯಾಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ನಿರ್ದೇಶಿಸಿದರು.

ತೆಂಗಿಗೆ ರೋಗ: ಜಿಲ್ಲೆಯಲ್ಲಿ ತೆಂಗು ಬೆಳೆಗೆ ರೋಗ ಬಾಧೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಬೆಳೆ ಕಳೆದುಕೊಳ್ಳಬೇಕಾಗುತ್ತದೆ. ತೆಂಗು ಬೆಳೆ ಅಪಾಯವನ್ನು ಎದುರಿಸುತ್ತಿದ್ದು, ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ರೋಗ ನಿಯಂತ್ರಣ ಹಾಗೂ ಇಳುವರಿ ಕುಸಿತ ಸುಧಾರಣೆ ಸೇರಿದಂತೆ ತೆಂಗು ಬೆಳೆ ಸಂರಕ್ಷಣೆಗೆ ಸಂಬಂಧಿಸಿದಂತೆ ಸಮಗ್ರವಾದ ವರದಿಯನ್ನು ಸಿದ್ಧಪಡಿಸಿ ತೆಂಗು ಅಭಿವೃದ್ಧಿ ಮಂಡಳಿ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಸಚಿವರು ತೋಟಗಾರಿಕೆ ಇಲಾಖೆ ಅಧಿಕಾರಿಗೆ ಸೂಚಿಸಿದರು.

ಗೊಬ್ಬರ ಬಳಕೆ: ಅತಿಯಾಗಿ ರಸಗೊಬ್ಬರ ಬಳಕೆಯಿಂದ ಭೂಮಿ ಫಲವತ್ತತೆ ಕಳೆದುಕೊಂಡು, ಚೌಳು ಭೂಮಿಯಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ 20 ವರ್ಷಗಳಲ್ಲಿ ಕೆಲವು ಪ್ರದೇಶಗಳಲ್ಲಿ ಯಾವ ಬೆಳೆಯನ್ನೂ ಬೆಳೆಯಲಾರದ ಸ್ಥಿತಿ ನಿರ್ಮಾಣವಾಗಲಿದೆ. ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಪರಮೇಶ್ವರ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶಿಸಿದರು.

ಸಾಕಷ್ಟು ಕಡೆಗಳಲ್ಲಿ ಮಣ್ಣು ಪರೀಕ್ಷೆ ಮಾಡಲಾಗಿದ್ದು, ಜಿಂಕ್, ಬೋರಾನ್ ಕೊರತೆ ಕಂಡು ಬಂದಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಎನ್.ರಮೇಶ್ ಮಾಹಿತಿ ನೀಡಿದರು.

ಡಿಡಿಪಿಐ ಬಿಇಒ ತಲೆದಂಡ

ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಕುಸಿದಿರುವುದಕ್ಕೆ ಸಚಿವ ಜಿ.ಪರಮೇಶ್ವರ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ‘ಎಂತಹ ಕೆಟ್ಟ ಪರಿಸ್ಥಿತಿಯಲ್ಲಿ ಇದ್ದೇವೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮುಂದಿನ ವರ್ಷ ಶೇ 90ರಷ್ಟು ಫಲಿತಾಂಶ ಬರದಿದ್ದರೆ ಡಿಡಿಪಿಐ ಬಿಇಒ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರೌಢಶಾಲೆಯಲ್ಲಿ ಮೂರು ವರ್ಷ ವಿದ್ಯಾರ್ಥಿಗಳು ಕಲಿಯುತ್ತಾರೆ. ಕೇವಲ 35 ಅಂಕಗಳನ್ನು ತೆಗೆದುಕೊಳ್ಳುವಂತೆ ಮಾಡದಿದ್ದರೆ ಏನು ಪ್ರಯೋಜನ. ಅಷ್ಟು ಕೆಲಸವೂ ನಿಮಗೆ ಆಗುವುದಿಲ್ಲವೆ? ಮಕ್ಕಳ ಜೀವನ ಹಾಳು ಮಾಡುವ ಹಕ್ಕು ನಿಮಗಿಲ್ಲ ಎಂದು ಗುಡುಗಿದರು. ಜಿಲ್ಲೆ ಶೈಕ್ಷಣಿಕವಾಗಿ ಮುಂದಿದೆ. ವಿದ್ಯಾರ್ಥಿಗಳು ಬುದ್ಧಿವಂತರಿದ್ದಾರೆ. ಆದರೆ ಅವರನ್ನು ದಡ್ಡರನ್ನಾಗಿ ಮಾಡುತ್ತಿದ್ದೀರಿ. ಮೂರು ವರ್ಷ ಪಾಠ ಮಾಡಿ 35 ಅಂಕಗಳನ್ನು ಪಡೆಯುವಂತೆ ಮಾಡಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಾಸಕ ಸಿ.ಬಿ.ಸುರೇಶ್‌ಬಾಬು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಫಲಿತಾಂಶ ಹೆಚ್ಚಳಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತಿಳಿಸಿದರು.

ಶಾಲಾ ಕೊಠಡಿಗೆ ಕಾಯಕಲ್ಪ

ನರೇಗಾ ಯೋಜನೆ ಬಳಸಿಕೊಂಡು ಶಾಲಾ ಕೊಠಡಿಗಳನ್ನು ದುರಸ್ತಿಪಡಿಸಲಾಗಿದೆ. ಹಿಂದಿನ ವರ್ಷದಿಂದ ಈ ಕೆಲಸ ಆರಂಭವಾಗಿದ್ದು ಈಗಾಗಲೇ ಶಾಲೆ ಕೊಠಡಿಗಳ ದುರಸ್ತಿ ಜತೆಗೆ ಕಾಂಪೌಂಡ್ ನಿರ್ಮಾಣ ಶೌಚಾಲಯ ಅಡುಗೆ ಕೋಣೆ ನಿರ್ಮಾಣದಂತಹ ಕೆಲಸಗಳು ನಡೆದಿವೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾಹಿತಿ ನೀಡಿದರು. ಈ ವರ್ಷವೂ ಇದು ಮುಂದುವರಿಯಲ್ಲಿದ್ದು ಒಂದೆರಡು ವರ್ಷಗಳಲ್ಲಿ ಜಿಲ್ಲೆಯಲ್ಲಿರುವ ಎಲ್ಲ ಶಾಲಾ ಕೊಠಡಿಗಳ ದುರಸ್ತಿ ಕಾರ್ಯ ಪೂರ್ಣಗೊಳ್ಳಲಿದೆ. ಮುಂದೆ ಶಾಲಾ ಕೊಠಡಿಗಳ ಕೊರತೆ ಇರುವುದಿಲ್ಲ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.