ಕುಣಿಗಲ್: ಕರ್ನಾಟಕ ರಾಷ್ಟ್ರೀಯ ಸಮಿತಿ ಪದಾಧಿಕಾರಿಗಳು ಮತ್ತು ಪೊಲೀಸರ ನಡುವಿನ ಸಂಘರ್ಷ ತಾರಕಕ್ಕೆ ಏರಿದ್ದು ಸೋಮವಾರ ಠಾಣೆಯ ಬಳಿ ಬಂದ ಕೆಆರ್‌ಎಸ್ ಪದಾಧಿಕಾರಿಗಳು ತಾಕತ್ತಿದ್ದರೆ ತಮ್ಮನ್ನು ಬಂಧಿಸುವಂತೆ ಪೊಲೀಸರಿಗೆ ಬಹಿರಂಗ ಸವಾಲು ಹಾಕಿದರು.
ಕಳೆದ ತಿಂಗಳು ಗ್ರಾಮ ಪಂಚಾಯಿತಿ ಚುನಾವಣೆ ಕರ್ತವ್ಯದಲ್ಲಿದ್ದ ಪೊಲೀಸರು ಹೊಯ್ಸಳ ವಾಹನದಲ್ಲಿ ಸಮವಸ್ತ್ರದಲ್ಲೇ ಮದ್ಯಪಾನ ಮಾಡಿದ್ದರು. ಈ ದೃಶ್ಯಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ಕೆಆರ್‌ಎಸ್ ಪದಾಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಈ ವಿಚಾರವಾಗಿ ಪೊಲೀಸ್ ಮತ್ತು ಕೆಆರ್‌ಎಸ್ ಪದಾಧಿಕಾರಿಗಳ ನಡುವೆ ಸಂಘರ್ಷ ನಡೆದಿತ್ತು.
ಕೆಆರ್‌ಎಸ್ ಪದಾಧಿಕಾರಿಗಳು ನೀಡಿದ ದೂರಿನ ನಂತರ ಪೊಲೀಸರು ಅಮಾನತುಗೊಂಡಿದ್ದರು.
ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪಿಎಸ್ಐ ವಿಕಾಸ್ ಮತ್ತು ಡಿಎಆರ್ ಪೊಲೀಸ್ ಸಂತೋಷ್, ಕೆಆರ್‌ಎಸ್ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣಾ ರೆಡ್ಡಿ, ಪ್ರಧಾನ ಕಾರ್ಯದರ್ಶಿ ದೀಪಕ್, ಉಪಾಧ್ಯಕ್ಷ ನಿಂಗೇಗೌಡ, ಯುವ ಘಟಕದ ಅಧ್ಯಕ್ಷ ಜಾಣಗೆರೆ ರಘು, ರಮೇಶ್ ಸೇರಿದಂತೆ 15 ಪದಾಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದರು.
‘ಪೊಲೀಸರು ದುರುದ್ದೇಶದಿಂದ ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ಯಾವುದೇ ಸಂಬಂದವಿಲ್ಲದವರ ಮೇಲೂ ಪ್ರಕರಣ ದಾಖಲಿಸಿದ್ದಾರೆ’ ಎಂದುಜಾಣಗೆರೆ ರಘು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.