ADVERTISEMENT

ಕುಣಿಗಲ್: ಸರ್ಕಾರಿ ಕಾಲೇಜಿನಲ್ಲಿ ಅವ್ಯವಸ್ಥೆ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 8 ಮೇ 2025, 13:39 IST
Last Updated 8 ಮೇ 2025, 13:39 IST
ಕುಣಿಗಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ತಾಲ್ಲೂಕು ಉಸ್ತುವಾರಿ ಅಧಿಕಾರಿ ವಿಶ್ವನಾಥ್ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ರಶ್ಮೀ ಇದ್ದರು
ಕುಣಿಗಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ತಾಲ್ಲೂಕು ಉಸ್ತುವಾರಿ ಅಧಿಕಾರಿ ವಿಶ್ವನಾಥ್ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ್ ರಶ್ಮೀ ಇದ್ದರು   

ಕುಣಿಗಲ್: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಸೆಮಿಸ್ಟಾರ್‌ನಲ್ಲಿ ಕಳಪೆ ಫಲಿತಾಂಶ ಬಂದಿದೆ. ಮೂಲಸೌಕರ್ಯ ಕೊರತೆ ಹೆಚ್ಚಾಗಿ ಅವ್ಯವಸ್ಥೆಯಾಗಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ತಾಲ್ಲೂಕು ಉಸ್ತುವಾರಿ ಅಧಿಕಾರಿ ವಿಶ್ವನಾಥ್ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ಫಲಿತಾಂಶದ ಬಗ್ಗೆ ಪ್ರಾಂಶುಪಾಲ ಮಾಯಾ ಸಾರಂಗ ಪಾಣಿಯೊಂದಿಗೆ ಚರ್ಚಿಸಿದರು. ಪ್ರಥಮ ಸೆಮಿಸ್ಟಾರ್‌ ವಾಣಿಜ್ಯ ವಿಭಾಗದಲ್ಲಿ 190 ವಿದ್ಯಾರ್ಥಿಗಳಿಗೆ ಕೇವಲ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವ ವಿಷಯ ತಿಳಿದು ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಸಂಪೂರ್ಣ ಮಾಹಿತಿ ಮತ್ತು ವಿಷಯವಾರು ಉಪನ್ಯಾಸಕರ ಫಲಿತಾಂಶದ ವಿವರ ನೀಡಲು ಸೂಚನೆ ನೀಡಿದರು.

ಕಾಲೇಜಿನ ಶೌಚಾಲಯ ಅವ್ಯವಸ್ಥೆ ಬಗ್ಗೆ ಗಮನಹರಿಸಲು ಸೂಚನೆ ನೀಡಿದರು. ಕಾಲೇಜು ಆವರಣದಲ್ಲಿ ₹5ಕೋಟಿ ವೆಚ್ಚದಲ್ಲಿ ಗ್ರಂಥಾಲಯ ಮತ್ತು ಪ್ರಯೋಗಾಲಯ ಕಟ್ಟಡಗಳು ನಿರ್ಮಾಣವಾಗಿದ್ದು, ಉದ್ಘಾಟನೆಯಾಗಿ ಆರು ತಿಂಗಳು ಕಳೆದರೂ ಬಳಸಲಾಗದ ದುಸ್ಥಿತಿಗೆ ತಲುಪಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಪ್ರಾಂಶುಪಾಲರು, ವಿದ್ಯುತ್ ಸೌಲಭ್ಯ ಕಲ್ಪಿಸದ ಕಾರಣ ಬಳಕೆ ಮಾಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದಾಗ, ಕಾಮಗಾರಿ ಪೂರ್ಣವಾಗದೆ ಇಲಾಖೆ ವಶಕ್ಕೆ ಪಡೆದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ADVERTISEMENT

ತಾಲ್ಲೂಕಿನಲ್ಲಿರುವ ಏಕೈಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಶೈಕ್ಷಣಿಕ ಪ್ರಗತಿ ಕುಂಠಿತವಾಗಿರುವ ಬಗ್ಗೆ ಮತ್ತು ಅವ್ಯವಸ್ಥೆ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಶಾಸಕರ ಸೂಚನೆ ಮೇರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕರು ಸೇರಿದಂತೆ ತಾಲ್ಲೂಕಿನ ಕೆಲ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಭೇಟಿ ಮತ್ತು ಸಭೆ ನಡೆಸಲಾಗುವುದು ಎಂದರು.

ತಹಶೀಲ್ದಾರ್ ರಶ್ಮಿ ಸೇರಿದಂತೆ ಉಪನ್ಯಾಸಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.