ADVERTISEMENT

ಮುದ್ದೇನಹಳ್ಳಿ | 3 ನದಿಗಳಿಗೆ ಚೆಕ್ ಡ್ಯಾಂ: ಸಚಿವ ಎನ್.ಎಸ್ ಬೋಸರಾಜು

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 7:09 IST
Last Updated 4 ಜನವರಿ 2026, 7:09 IST
ಕೊಡಿಗೇನಹಳ್ಳಿ ಹೋಬಳಿ ಮುದ್ದೇನಹಳ್ಳಿಯಲ್ಲಿ ಶನಿವಾರ ಚೆಕ್ ಡ್ಯಾಮ್ ಕಮ್ ಬ್ಯಾರೇಜ್ ಕಾಮಗಾರಿಗೆ ಸಚಿವ ಎನ್.ಎಸ್.ಭೋಸರಾಜು ಶಂಕುಸ್ಥಾಪನೆ ನೆರವೇರಿಸಿದರು
ಕೊಡಿಗೇನಹಳ್ಳಿ ಹೋಬಳಿ ಮುದ್ದೇನಹಳ್ಳಿಯಲ್ಲಿ ಶನಿವಾರ ಚೆಕ್ ಡ್ಯಾಮ್ ಕಮ್ ಬ್ಯಾರೇಜ್ ಕಾಮಗಾರಿಗೆ ಸಚಿವ ಎನ್.ಎಸ್.ಭೋಸರಾಜು ಶಂಕುಸ್ಥಾಪನೆ ನೆರವೇರಿಸಿದರು   

ಕೊಡಿಗೇನಹಳ್ಳಿ: ರಾಜ್ಯದಲ್ಲಿ ಅಂತರ್ಜಲ ವೃದ್ಧಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅನೇಕ ರೈತಪರ ಯೋಜನೆಗಳನ್ನು ಕೈಗೊಂಡಿದ್ದು ಕೃಷಿಕರ ಜೀವನದಲ್ಲಿ ಸುಧಾರಣೆಯಾಗಲಿದೆ ಎಂದು ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಎನ್.ಎಸ್ ಬೋಸರಾಜು ಹೇಳಿದರು.

ಹೋಬಳಿಯ ಮುದ್ದೇನಹಳ್ಳಿಯಲ್ಲಿ ಶನಿವಾರ ಚೆಕ್ ಡ್ಯಾಂ ಕಮ್ ಬ್ಯಾರೇಜ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಕೊಡಿಗೇನಹಳ್ಳಿ ಹೋಬಳಿಯ ಮುದ್ದೇನಹಳ್ಳಿ-ಶಾನಗಾನಹಳ್ಳಿ ಗ್ರಾಮದ ನಡುವೆ ಜಯಮಂಗಲಿ ನದಿಗೆ, ತಿಂಗಳೂರು-ಕಲಿದೇವಪುರ ನಡುವೆ ಕುಮುದ್ವತಿ ನದಿಗೆ, ಜಕ್ಕೇನಹಳ್ಳಿ-ಶಂಕರಪುರ ನಡುವೆ ಸುವರ್ಣಮುಖಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ಕಮ್‌ ಬ್ರಿಡ್ಜ್ ಕಾಮಗಾರಿ ನಾಲ್ಕು ತಿಂಗಳೊಳಗೆ ಪೂರ್ಣಗೊಳ್ಳುವ ಭರವಸೆ ಇದೆ ಎಂದರು.

ADVERTISEMENT

ರಾಜ್ಯದಲ್ಲಿ ಪರಿಶಿಷ್ಟರಿಗೆ 12,264 ಕೊಳವೆಬಾವಿಗಳನ್ನು ಕೊರೆಸಿಕೊಟ್ಟಿರುವುದರಿಂದ ಬಹಳಷ್ಟು ರೈತರಿಗೆ ಅನುಕೂಲವಾಗಿದೆ. ಸರ್ಕಾರ ಜನರ ಆರೋಗ್ಯ, ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರನ್ನು ತಲುಪುತ್ತಿವೆ ಎಂದರು.

ಶಾಸಕ ಕೆ.ಎನ್. ರಾಜಣ್ಣ ಮಾತನಾಡಿ, ಈ ಕಾಮಗಾರಿ ₹29.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ರೈತರ ಅಭ್ಯುದಯ ಹಾಗೂ ರೈತರ ಜೀವನವನ್ನು ಹಸನು ಮಾಡುವುದಕ್ಕೆ ಸರ್ಕಾರ ಈ ಕಾರ್ಯಕ್ರಮ ರೂಪಿಸಿದೆ. ರಾಜ್ಯ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರದ ಕೊಡುಗೆಯೂ ಇದೆ ಎಂದರು.

ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಕೊಡಿಸಿದರೆ ಮುಂದೆ ಅವರು ಒಳ್ಳೆಯ ಹುದ್ದೆ ಪಡೆಯಲು, ಆರ್ಥಿಕವಾಗಿ ಸದೃಢರಾಗಲು ನೆರವಾಗುತ್ತದೆ ಎಂದರು.

ಸಣ್ಣ ನೀರಾವರಿ ಇಲಾಖೆ ಕಾರ್ಯದರ್ಶಿ ಬಿ.ಕೆ. ಪವಿತ್ರ, ಮುಖ್ಯ ಎಂಜಿನಿಯರ್ ಪ್ರಕಾಶ್ ಶ್ರೀಹರಿ, ಸೂಪರಿಟೆಂಡೆಂಟ್‌ ಎಂಜಿಯರ್ ಗುರು, ಇಇ ಸುರೇಶ್, ಎಇಇ ತಿಪ್ಪೇಸ್ವಾಮಿ, ಎಂಜಿಯರ್ ಮಂಜುಕಿರಣ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಮಾಂಜಿಮ್ಮ, ತಹಶೀಲ್ದಾರ್ ಶ್ರೀನಿವಾಸ್, ಇಒ ಲಕ್ಷ್ಮಣ್, ಅನಿಲ್ ಕುಮಾರ್ ಯಾದವ್ ಹಾಜರಿದ್ದರು.

ಗೌರೆಡ್ಡಿಪಾಳ್ಯಕ್ಕೆ ಭೇಟಿ
ಸಚಿವ ಎನ್.ಎಸ್.ಭೋಸರಾಜು ಶಾಸಕ ಕೆ.ಎನ್. ರಾಜಣ್ಣ ಹಾಗೂ ಅಧಿಕಾರಿಗಳ ತಂಡ ಕೊಡಿಗೇನಹಳ್ಳಿ ಹೋಬಳಿ ಗೌರೆಡ್ಡಿಪಾಳ್ಯಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದರು. ಅಲ್ಲಿಯೇ ಶೀಘ್ರ ₹8 ರಿಂದ ₹10 ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಮ್ ಕಮ್ ಬ್ಯಾರೇಜ್ ನಿರ್ಮಿಸಲಾಗುವುದು ಎಂದು ಸ್ಥಳೀಯರಿಗೆ ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.