ADVERTISEMENT

ನಿಷ್ಪ್ರಯೋಜಕ ನೀರಿನ ಟ್ಯಾಂಕ್‌

ಕೇದಿಗೆಹಳ್ಳಿ: ಹನಿ ನೀರು ಕಾಣದ ನೀರು ಟ್ಯಾಂಕ್‌: ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 5:06 IST
Last Updated 25 ನವೆಂಬರ್ 2025, 5:06 IST
ಕೇದಿಗೆಹಳ್ಳಿ ವಾರ್ಡ್‌ನ ನೀರಿನ ಟ್ಯಾಂಕ್‌
ಕೇದಿಗೆಹಳ್ಳಿ ವಾರ್ಡ್‌ನ ನೀರಿನ ಟ್ಯಾಂಕ್‌   

ಚಿಕ್ಕನಾಯಕನಹಳ್ಳಿ: ಪಟ್ಟಣದ ಕೇದಿಗೆಹಳ್ಳಿ ವಾರ್ಡ್‌ನ ಕುಡಿಯುವ ನೀರು ಸಂಗ್ರಹ ಟ್ಯಾಂಕ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿಷ್ಪ್ರಯೋಜಕವಾಗಿದೆ.

ಈ ಟ್ಯಾಂಕ್‌ ನಿರ್ಮಾಣಗೊಂಡು ವರ್ಷಗಳೇ ಕಳೆದರೂ ಒಮ್ಮೆಯೂ ಬಳಕೆಯಾಗದೆ ಒಣಗಿದೆ. ದುಗಡಿಹಳ್ಳಿ ಪಂಚಾಯಿತಿ ಪ್ರಾರಂಭಗೊಳ್ಳುವ ವ್ಯಾಪ್ತಿಯ ನಾಲ್ಕು ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯ ನೀಡುವಲ್ಲಿ ಪುರಸಭೆ ವಿಫಲವಾಗಿದೆ.

ಈ ಟ್ಯಾಂಕ್‌ಗೆ ಹಲವು ವರ್ಷಗಳಿಂದ ನೀರು ಸರಬರಾಜು ಸಂಪರ್ಕವಿದ್ದರೂ, ನೀರು ಹರಿಸದೆ ಬಿಸಿಲಿನ ಶಾಖಕ್ಕೆ ಒಣಗಿ ನಿಂತಿದೆ. ಟ್ಯಾಂಕ್‌ ಮೇಲ್ಬಾಗದಲ್ಲೇ ಅಭಿವೃದ್ಧಿ ಕಾಮಗಾರಿಯ ನಾಮಫಲಕವಿದೆಯೇ ಹೊರತು, ಅದರ ಪ್ರಯೋಜನ ದಕ್ಕಿಲ್ಲ. ಇದಕ್ಕೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯವೇ ಕಾರಣ ಎನ್ನುತ್ತಾರೆ ಸ್ಥಳೀಯರು.

ADVERTISEMENT

ಟ್ಯಾಂಕ್ ನಿರ್ಮಿಸಿ ವರ್ಷಗಳು ಕಳೆದಿವೆ. ನಿರಂತರವಾಗಿ ನೀರು ಸಂಗ್ರಹಿಸಿಡುವುದರಿಂದ ಕಟ್ಟಡದ ಕಾಂಕ್ರೀಟ್ ರಚನೆಗೆ ಅಗತ್ಯ ತೇವಾಂಶ ದೊರೆಯುತ್ತದೆ. ಆದರೆ ಈ ಟ್ಯಾಂಕ್‌ಗೆ ಒಮ್ಮೆಯೂ ನೀರಿನ ಸ್ಪರ್ಶವಿಲ್ಲದೆ, ಬಿಸಿಲಿನ ಝಳಕ್ಕೆ ಸಂಪೂರ್ಣ ಒಣಗಿದೆ. ಟ್ಯಾಂಕ್‌ ಗೋಡೆಗಳು ಮತ್ತು ಮೇಲ್ಭಾಗದ ಕಾಂಕ್ರೀಟ್ ರಚನೆಗಳು ಬಿರುಕುಗೊಳ್ಳುವ ಸ್ಥಿತಿ ತಲುಪಿದೆ. ಮತ್ತಷ್ಟು ವಿಳಂಬವಾದರೆ ಅದು ಸಂಪೂರ್ಣವಾಗಿ ಹಾಳಾಗುವ ಅಪಾಯವಿದೆ.

ಕೆಲವೇ ತಿಂಗಳುಗಳಲ್ಲಿ ಬೇಸಿಗೆ ಪ್ರಾರಂಭಗೊಳ್ಳಲಿದೆ. ಪುರಸಭೆ ವ್ಯಾಪ್ತಿಯ ಇತರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆ ಹೆಚ್ಚಿದೆ. ಕೇದಿಗೆಹಳ್ಳಿಯಲ್ಲಿ ನೀರಿನ ಹಾಹಾಕಾರ ಎದುರಾಗುವ ಆತಂಕದಲ್ಲಿದ್ದಾರೆ ಸ್ಥಳೀಯರು. ಟ್ಯಾಂಕ್ ಸಿದ್ಧವಿದ್ದರೂ ಅದನ್ನು ಬಳಸದಿರುವುದು ಆಡಳಿತಾತ್ಮಕ ನಿರ್ಲಕ್ಷ್ಯ ಎನ್ನತ್ತಾರೆ ಸ್ಥಳೀಯರು.

ಪುರಸಭೆ ಅಧಿಕಾರಿಗಳು ತಕ್ಷಣ ಎಚ್ಚೆತ್ತು, ಟ್ಯಾಂಕ್‌ ಪರಿಶೀಲಿಸಿ, ಅಗತ್ಯ ದುರಸ್ತಿ ಕೈಗೊಳ್ಳಬೇಕು. ಕೇದಿಗೆಹಳ್ಳಿ ವಾರ್ಡ್‌ಗೆ ಸಮರ್ಪಕವಾಗಿ ನೀರು ಸರಬರಾಜು ಮಾಡಳಬೇಕು ಎಂದು ಸ್ಥಳೀಯ ನಿವಾಸಿ ಶೇಖರ್ ಒತ್ತಾಯಿಸಿದ್ದಾರೆ.

ಸ್ಪಂದಿಸದ ಅಧಿಕಾರಿಗಳು: ಸಾರ್ವಜನಿಕರು ತಮ್ಮ ವಾರ್ಡ್‌ಗಳಲ್ಲಿನ ನೀರಿನ ಸಮಸ್ಯೆ, ನೈರ್ಮಲ್ಯ, ಒಳಚರಂಡಿ, ಬೀದಿ ದೀಪ ಸೇರಿದಂತೆ ಯಾವುದೇ ಸಮಸ್ಯೆ ಹೊತ್ತು  ಪುರಸಭೆ ಕಚೇರಿಗೆ ಹೋದಾಗ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಇದನ್ನು ಮುಖ್ಯಾಧಿಕಾರಿ ಗಮನಕ್ಕೆ ತಂದರೆ, ಅವರು ‘ಇಂಜಿನಿಯರ್ ಗಮನಕ್ಕೆ ತನ್ನಿ’ ಎಂದು ಸಿದ್ಧ ಉತ್ತರ ನೀಡುತ್ತಾರೆ. ಎಂಜಿನಿಯರ್ ಬಳಿ ಪ್ರಸ್ತಾಪಿಸಿದರೆ, ‘ಮುಖ್ಯಾಧಿಕಾರಿಗಳ ಗಮನಕ್ಕೆ ತನ್ನಿ’ ಎಂದು ಕಳುಹಿಸುತ್ತಾರೆ. ಇದರಿಂದಾಗಿ ಸಣ್ಣ ಸಮಸ್ಯೆಯೂ ದೀರ್ಘಕಾಲ ಪರಿಹಾರವಾಗದೇ ಉಳಿಯುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

‘ದುಗುಡಿಹಳ್ಳಿ ಗಡಿ ಭಾಗ ಪ್ರಾರಂಭವಾಗುವುದೇ ನಮ್ಮ ಮನೆಯಿಂದ. ನೀರಿನ ವ್ಯವಸ್ಥೆ ಕಲ್ಪಿಸುವಂತೆ ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇಲ್ಲಿನ ನಾಲ್ಕು ಮನೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿರುವುದರಿಂದ ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದರೆ ಹೊನ್ನೇಬಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಲೆಮಾರಿ ಸಮುದಾಯದವರಿಗೆ ಬೋರ್‌ವೆಲ್‌ ಕೊರೆಸಿದ್ದಾರೆ. ಪುರಸಭೆ ಅಧಿಕಾರಿಗಳ ತಾರತಮ್ಯದಿಂದಾಗಿ ಹೈರಾಣಗಿದ್ದೇವೆ’ ಎನ್ನುತ್ತಾರೆ ಅಶೋಕ್.

ಟ್ಯಾಂಕ್ ನಾ ಸುತ್ತಮುತ್ತಲಿನ ಚಿತ್ರಣ.
ಗಿಡ ಬಳ್ಳಿ ಬೆಳೆದು ಆವೃತವಾಗಿದೆ.
ನೀರಿನ ಸಂಪರ್ಕ ಕಲ್ಪಿಸುವ ಪೈಪ್ ತುಕ್ಕು ಹಿಡಿದಿರುವುದು.
2017-18 ರಲ್ಲಿ ಸ್ಥಾಪನಗೊಂಡ ಜಲ ಸಂಗ್ರಹಗಾರದ ನಾಮಫಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.