ADVERTISEMENT

ಚಿಕ್ಕನಾಯಕನಹಳ್ಳಿ: ಹೇಮಾವತಿ ನೀರಿಗಾಗಿ ಧರಣಿಗೆ ತೀರ್ಮಾನ

ಹೇಮಾವತಿ ನಾಲಾ ಹೋರಾಟ ಸಮಿತಿ ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 14:33 IST
Last Updated 1 ಜೂನ್ 2025, 14:33 IST
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ನವಿಲೇಕೆರೆ ಬಳಿ ಹೇಮಾವತಿ ನಾಲಾ ಹೋರಾಟ ಸಮಿತಿ ಕಾರ್ಯಕರ್ತರ ಸಭೆ ನಡೆಯಿತು
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ನವಿಲೇಕೆರೆ ಬಳಿ ಹೇಮಾವತಿ ನಾಲಾ ಹೋರಾಟ ಸಮಿತಿ ಕಾರ್ಯಕರ್ತರ ಸಭೆ ನಡೆಯಿತು   

ಚಿಕ್ಕನಾಯಕನಹಳ್ಳಿ: ತಾಲ್ಲೂಕಿಗೆ ಹರಿಯಬೇಕಿರುವ ಹೇಮಾವತಿ ನೀರಿಗಾಗಿ ಅನಿರ್ಧಿಷ್ಟಾವಧಿ ಧರಣಿ ನಡೆಸಲು ವಿವಿಧ ಗ್ರಾಮಗಳ ಹೋರಾಟ ಸಮಿತಿ ಕಾರ್ಯಕರ್ತರು ತೀರ್ಮಾನಿಸಿದರು.

ತಾಲ್ಲೂಕಿನ ನವಿಲೆಕೆರೆ ಏರಿ ಬಳಿಯ ಭೂತಪ್ಪನ ಗುಡಿ ಬಳಿ ಭಾನುವಾರ ಹೇಮಾವತಿ ನಾಲೆ ಹೋರಾಟ ಸಮಿತಿಯ ನೂರಾರು ಸದಸ್ಯರು ಸಭೆ ನಡೆಸಿದರು.

ಸಭೆಯಲ್ಲಿ ನಡೆದ ಚರ್ಚೆಯಲ್ಲಿ ‘ಹೇಮಾವತಿ ನೀರಿನಲ್ಲಿ ನಮ್ಮ ಭಾಗಕ್ಕಾಗಿರುವ ಅನ್ಯಾಯದ ಬಗ್ಗೆ ವಿವರಿಸಿ ಕಳೆದ ವರ್ಷ ಹೇಮಾವತಿ ಅಣೆಕಟ್ಟು ಹಲವು ಬಾರಿ ತುಂಬಿ ಹರಿದರೂ ತಾಲ್ಲೂಕಿಗೆ ಹರಿಯಬೇಕಿದ್ದ ನಮ್ಮ ಪಾಲಿನ ನೀರು ಹರಿಯಲಿಲ್ಲ. ತಾಲ್ಲೂಕು ಆಡಳಿತದ ನಿರ್ಲಕ್ಷ್ಯದಿಂದಾಗಿ ನಾಲೆಯಲ್ಲಿದ್ದ ಹೂಳನ್ನು ಬೇಸಿಗೆಯ ಸಂದರ್ಭದಲ್ಲಿ ತೆಗೆಸದ ಕಾರಣ ಬೋರನಕಣಿವೆವರೆಗೂ ಹರಿಯಬೇಕಿದ್ದ ನೀರು ಎರಡು ಕೆರೆಗಳು ಭರ್ತಿಯಾಗುವಷ್ಟಕ್ಕೆ ಸೀಮಿತವಾಯಿತು’ ಎಂದರು.

ADVERTISEMENT

ಈ ಬೇಸಿಗೆಯಲ್ಲೂ ನಾಲೆಯಲ್ಲಿನ ಹೂಳನ್ನು ತೆಗೆಸುವಲ್ಲಿ ಇಲ್ಲಿನ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ತೋರಿದೆ. ಈ ಬಾರಿ ನಾಲೆಯಲ್ಲಿ ನೀರು ಹರಿಯದಿದ್ದರೆ ಅಂತರ್ಜಲದ ಕುಸಿತದಿಂದ ನೂರಾರು ಅಡಿಕೆ ಹಾಗೂ ತೆಂಗಿನ ತೋಟಗಳು ನಾಶವಾಗಲಿದೆ ಎಂದು ಸೇರಿದ್ದ ರೈತ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಅಸ್ಥಿತ್ವದ ಉಳಿವಿಗಾಗಿ ದೀರ್ಘ ಹಾಗೂ ದಿಟ್ಟ ಹೋರಾಟ ಅನಿವಾರ್ಯ ಎಂಬ ನಿರ್ಧಾರಕ್ಕೆ ಬರಲಾಯಿತು. ಮುಂದಿನ ಸೋಮವಾರ ತಾಲ್ಲೂಕು ಕಚೇರಿಯ ಮುಂದೆ ಬೃಹತ್ ಪ್ರತಿಭಟನೆಯೊಂದಿಗೆ ನೀರಿನ ಹಕ್ಕು ಈಡೇರುವವರೆಗೂ ಅನಿರ್ಧಿಷ್ಟವಧಿ ಧರಣಿ ನಡೆಸಲು ತೀರ್ಮಾನಿಸಲಾಯಿತು.

ಪ್ರಗತಿಪರ ರೈತ ಷಡಕ್ಷರಿ ಶಂಕರಲಿಂಗಪ್ಪ ಮಾತನಾಡಿ, ಇದು ತಾಲ್ಲೂಕಿನ ರೈತರ ಅಳಿವು-ಉಳಿವಿನ ಪ್ರಶ್ನೆ. ಅಧಿಕಾರ ಹೊಂದಿದ ಶಾಸಕರು ಮೊದಲು ತಾಲ್ಲೂಕಿನ ರೈತರ ನೀರಿನ ಆದ್ಯತೆಗಳ ಬಗ್ಗೆ ಗಮನಹರಿಸಬೇಕಿತ್ತು. ಆದರೆ ಜನರ ಮೂಗಿಗೆ ತುಪ್ಪ ಸವರುತ್ತಿದ್ದಾರೆ ಎಂದು ದೂರಿದರು.

ನಿರ್ದೇಶಕ ಬಿ.ಎಸ್.ಲಿಂಗದೇವರು ಮಾತನಾಡಿ, ಜಿಲ್ಲೆಗೆ ಹರಿಯಬೇಕಿದ್ದ ಹೇಮಾವತಿ ನೀರನ್ನು ಬೇರೆಡೆ ತೆಗೆದುಕೊಂಡು ಹೋಗುವ ಸಮಸ್ಯೆ ಒಂದೆಡೆಯಾದರೆ,  ತಾಲ್ಲೂಕಿನಲ್ಲಿ ನಮ್ಮ ಭಾಗಕ್ಕೆ ಹರಿಸಬೇಕಿದ್ದ ನೀರು ಇದ್ದರೂ ಹರಿಯದ ಸ್ಥಿತಿ ಉಂಟಾಗಿದೆ. ಕತ್ತುಹಿಸುಕಿದ ಸ್ಥಿತಿ ನಮ್ಮದಾಗಿದೆ. ನಾವುಗಳು ಹೊಸದಾಗಿ ತೋಟಗಳನ್ನು ಮಾಡಬೇಕಾ, ಬೇಡವಾ ಎನ್ನುವ ಸಂದಿಗ್ಧತೆ ಉoಟಾಗಿದೆ ಎಂದರು.

ವಕೀಲ ಎಂ.ಬಿ. ನಾಗರಾಜ್ ಮಾತನಾಡಿ, ತಾಲ್ಲೂಕಿನ ಪ್ರತಿ ಗ್ರಾಮದ ರೈತರು, ವಿವಿಧ ಪಕ್ಷದ ಮುಖಂಡರು, ಸಂಘ, ಸಂಸ್ಥೆಗಳ ಸಂಚಾಲಕರು, ಮಹಿಳಾ ಸಂಘಟನೆಗಳು ಹಾಗೂ ಮಠಾಧೀಶರು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ಕಾರ್ಯಕರ್ತ ಮಧು ಮಾತನಾಡಿದರು. ಸಭೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಆಟೊ ಮಂಜು, ಶರತ್, ಮನು, ದಯಾನಂದ್, ಕಿರಣ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.