
ಚಿಕ್ಕನಾಯಕನಹಳ್ಳಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಿಡಿಒಗಳು ನೈರ್ಮಲ್ಯಕ್ಕೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಸ್ವಚ್ಛತೆಗಾಗಿ ಲಭ್ಯವಿರುವ ಅನುದಾನವನ್ನು ಸಮರ್ಪಕವಾಗಿ ಬಳಸಿ. ಮುಂದಿನ ವಾರ ನಾನು ತಾಲ್ಲೂಕಿಗೆ ಭೇಟಿ ನೀಡಿದಾಗ ಹಳ್ಳಿಗಳಲ್ಲಿ ಕಸದ ರಾಶಿ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸ್ಥಳದಲ್ಲೇ ಕ್ರಮ ಕೈಗೊಳ್ಳಲಾಗುವುದು. ಬೇಸಿಗೆ ಹಿನ್ನಲೆಯಲ್ಲಿ ಯಾವುದೇ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೂರದಂತೆ ಎಚ್ಚರವಹಿಸಿ. ಸಾರ್ವಜನಿಕರ ದೂರವಾಣಿ ಕರೆಗಳಿಗೆ ಅಧಿಕಾರಿಗಳು ಸ್ಪಂದಿಸಬೇಕು’ ಎಂದು ತಾಕೀತು ಮಾಡಿದರು.
ಪಟ್ಟಣದ ಮಹಾಲಕ್ಷ್ಮಿ ಬಡಾವಣೆ, ವೆಂಕಣ್ಣನಕಟ್ಟೆ ಮತ್ತು ಕೊಡಗಲ್ ರಸ್ತೆ ಪಾರ್ಕ್‌ಗಳಿಗೆ ಭೇಟಿ ನೀಡಿ, ಪ್ರಧಾನ್ ಮಂತ್ರಿ ಅವಾಜ್ ಯೋಜನೆಯಡಿ 410 ನಿವೇಶನಗಳ ಸ್ಥಳ ಹಾಗೂ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಆಶ್ರಯ ನಿವೇಶನಗಳ ಸ್ಥಳ ಪರಿಶೀಲಿಸಿ ಸೌಕರ್ಯ ಒದಗಿಸುವಂತೆ ಪಿಡಿಒಗಳಿಗೆ ನಿರ್ದೇಶಿಸಿದರು.
ಉಪಕಾರ್ಯದರ್ಶಿ ಸಂಜೀವಪ್ಪ ಮಾತನಾಡಿ, ಯಾವುದೇ ಯೋಜನೆಯಿಂದ ಫಲಾನುಭವಿಗಳಿಗೆ ಅನಾನುಕೂಲವಾಗಬಾರದು. ಅಧಿಕಾರಿಗಳು ಮುತುವರ್ಜಿ ವಹಿಸಿ ತಾಲ್ಲೂಕಿನ ಪ್ರಗತಿ ಕಾಯ್ದುಕೊಳ್ಳಬೇಕು. ನರೇಗಾ ಯೋಜನೆ ಮಾನವ ದಿನಗಳ ಸೃಜನೆ, ಇ-ಕೆವೈಸಿ ನೋಂದಣಿ ಪ್ರಗತಿ ಹೆಚ್ಚಿಸಬೇಕು. ನಿಗದಿತ ಸಮಯಕ್ಕೆ ಎಲ್ಲ ಯೋಜನೆಗಳ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ದೊಡ್ಡಸಿದ್ದಯ್ಯ, ತಹಶೀಲ್ದಾರ್ ಮಮತಾ, ಉಪ ವಿಭಾಗಾಧಿಕಾರಿ ಸಪ್ತಶ್ರೀ, ಸಹಾಯಕ ನಿರ್ದೇಶಕ ಇಂದ್ರೇಶ್, ತಾಪಂ ವ್ಯವಸ್ಥಾಪಕ ಬಸವರಾಜು ಹಾಗೂ 27 ಗ್ರಾಮ ಪಂಚಾಯಿತಿಗಳ ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಉಪಸ್ಥಿತರಿದ್ದರು.
‘ಪಟ್ಟಣದ ಕೆರೆ ಅಭಿವೃದ್ಧಿಗೆ ಅಮೃತ ಯೋಜನೆಯಡಿ ಮಂಜೂರಾಗಿರುವ ₹60 ಕೋಟಿ ವೆಚ್ಚದ ಕಾಮಗಾರಿ ಇನ್ನೂ ಪ್ರಾರಂಭವಾಗಿಲ್ಲ. ಮೂರು ತಿಂಗಳಿನಿಂದ ನಿಮ್ಮ ಕಾರ್ಯವೈಖರಿ ಬಗ್ಗೆ ಸಾಲು ಸಾಲು ದೂರುಗಳು ಬಂದಿವೆ. ಕೆರೆ ಅಭಿವೃದ್ಧಿಯಾದರೆ ಮಾತ್ರ ಹೇಮಾವತಿ ನೀರು ತುಂಬಿಸಲು ಹಾಗೂ ಅಂತರ್ಜಲ ಹೆಚ್ಚಿಸಲು ಸಾಧ್ಯ. ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನಿರ್ಲಕ್ಷ್ಯವಹಿಸಿದರೆ ಮುಖ್ಯಾಧಿಕಾರಿ ವಿರುದ್ಧ ವರದಿ ನೀಡಿ’ ಎಂದು ಉಪ ವಿಭಾಗಾಧಿಕಾರಿ ಸಪ್ತಶ್ರೀ ಅವರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.