
ಚಿಕ್ಕನಾಯಕನಹಳ್ಳಿ ನೆಹರೂ ವೃತ್ತದಲ್ಲಿ ಮಾರ್ಗಸೂಚಿ ಫಲಕಕ್ಕೆ ಅಡ್ಡಲಾಗಿ ಹಾಕಿರುವ ಫ್ಲೆಕ್ಸ್‌ಗಳು
ಚಿಕ್ಕನಾಯಕನಹಳ್ಳಿ: ಪಟ್ಟಣದ ಪ್ರಮುಖ ಕೇಂದ್ರವಾದ ನೆಹರೂ ವೃತ್ತದಲ್ಲಿ ಅಳವಡಿಸಿರುವ ಮಾರ್ಗಸೂಚಿ ಫಲಕಗಳು ಈಗ ಫ್ಲೆಕ್ಸ್ ಮತ್ತು ಬ್ಯಾನರ್‌ಗಳ ಮರೆಯಲ್ಲಿ ಅಡಗಿವೆ.
ಇದರಿಂದಾಗಿ ರಾತ್ರಿ ಸಂಚರಿಸುವ ದೊಡ್ಡ ವಾಹನಗಳ ಚಾಲಕರು ದಾರಿ ತಿಳಿಯದೆ ತೊಂದರೆ ಅನುಭವಿಸುತ್ತಿದ್ದಾರೆ. ನೆಹರೂ ವೃತ್ತದಿಂದ ನಾನಾ ಊರುಗಳಿಗೆ ಹೋಗುವ ಮಾರ್ಗಗಳನ್ನು ಸೂಚಿಸುವ ನಾಮಫಲಕವನ್ನು ಪುರಸಭೆ ಅಳವಡಿಸಿದೆ. ಆದರೆ ವಿವಿಧ ಸಂಘ-ಸಂಸ್ಥೆಗಳು ಹಾಗೂ ಕಾರ್ಯಕ್ರಮ ಆಯೋಜಕರು ತಮ್ಮ ಪ್ರಚಾರಕ್ಕಾಗಿ ಈ ನಾಮಫಲಕದ ಮೇಲೆಯೇ ಅಥವಾ ಅದರ ಮುಂಭಾಗದಲ್ಲೇ ಬೃಹತ್ ಫ್ಲೆಕ್ಸ್ ಬ್ಯಾನರ್‌ಗಳನ್ನು ಅಳವಡಿಸುತ್ತಿದ್ದಾರೆ.
ರಾತ್ರಿ 10 ಗಂಟೆ ನಂತರ ಸಂಚರಿಸುವ ದೊಡ್ಡ ಲಾರಿಗಳು, ನಾಮಫಲಕ ಕಾಣದ ಕಾರಣ ದಾರಿ ತಪ್ಪಿ ಹಾಗಲವಾಡಿ ಗೇಟ್ ಕಡೆಗೆ ಹೋಗುತ್ತಿವೆ. ಅಲ್ಲಿಗೆ ಹೋದ ನಂತರ ರಸ್ತೆ ಕಿರಿದಾಗಿರುವುದರಿಂದ ಲಾರಿಗಳನ್ನು ಮುಖ್ಯರಸ್ತೆಗೆ ಹಿಂತಿರುಗಿಸಲು ಸಾಧ್ಯವಾಗದೆ ಚಾಲಕರು ಗಂಟೆಗಟ್ಟಲೆ ಪರದಾಡುವಂತಾಗಿದೆ.
ಸುಗಮ ಸಂಚಾರಕ್ಕಾಗಿ ಪಟ್ಟಣದಲ್ಲಿನ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸುವಂತೆ ಪೊಲೀಸ್ ಇಲಾಖೆ ಪುರಸಭೆಗೆ ಈಗಾಗಲೇ ಲಿಖಿತ ಮನವಿ ಮಾಡಿತ್ತು. ಆದರೆ ಪುರಸಭೆ ಅಧಿಕಾರಿಗಳು ಇದುವರೆಗೂ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಂಡಿಲ್ಲ.
ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವವರು ಇತರರಿಗೆ ತೊಂದರೆಯಾಗುತ್ತದೆಯೇ ಎಂದು ಯೋಚಿಸುವುದು ಅಗತ್ಯ. ಸಂಬಂಧಪಟ್ಟ ಪುರಸಭಾ ಅಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ, ನಾಮಫಲಕಗಳನ್ನು ಮುಚ್ಚಿರುವ ಬ್ಯಾನರ್‌ಗಳನ್ನು ತೆರವುಗೊಳಿಸಿ ವಾಹನ ಸವಾರರಿಗೆ ದಾರಿ ಸುಗಮಗೊಳಿಸಬೇಕು ಎಂದು ಪಟ್ಟಣ ನಿವಾಸಿಗಳು ಒತ್ತಾಯಿಸಿದ್ದಾರೆ.
ಚಾಲಕರ ಪರದಾಟ
ಭಾರಿ ಗಾತ್ರದ ವಾಹನಗಳು ರಾತ್ರಿ ವೇಳೆ ನೆಹರೂ ವೃತ್ತದಲ್ಲಿ ಮಾರ್ಗಸೂಚಿ ಫಲಕ ಕಾಣದೆ ಮತ್ತೊಂದು ದಾರಿಯಲ್ಲಿ ಹೋಗಿ ಮುಖ್ಯ ರಸ್ತೆಗೆ ಹಿಂದಿರುಗಲು ಪರದಾಡುವಂತಾಗಿದೆ. ಅಧಿಕಾರಿಗಳು ಮಾರ್ಗಸೂಚಿ ಫಲಕಕ್ಕೆ ಅಡ್ಡಲಾಗಿ ಯಾವುದೇ ಫಲಕಗಳನ್ನು ಅಳವಡಿಸಬಾರದು - ಮಂಜುನಾಥ್, ಆಟೊ ಚಾಲಕರ ಸಂಘ ಅಧ್ಯಕ್ಷ
ಬೇರೆಡೆ ವ್ಯವಸ್ಥೆ ಮಾಡಿ
ಯಾವುದೇ ಕಾರ್ಯಕ್ರಮ ಆಯೋಜನೆಗೊಂಡರು ವೃತ್ತದಲ್ಲಿ ಫ್ಲೆಕ್ಸ್ ಹಾಕುತ್ತಾರೆ. ಅಲ್ಲಿರುವ ಮಾರ್ಗಸೂಚಿಯನ್ನು ಒತ್ತಾಯಪೂರ್ವಕವಾಗಿ ಪುರಸಭೆಯಿಂದ ಹಾಕಿಸಿದ್ದೇವೆ. ವಾಹನ ಸವಾರರಿಗೆ ಮಾರ್ಗಸೂಚಿಯ ಪ್ರಯೋಜನವಿಲ್ಲದಂತೆ ಪ್ಲೆಕ್ಸ್‌ಗಳನ್ನು ಅಳವಡಿಸುತ್ತಿದ್ದಾರೆ. ಫ್ಲೆಕ್ಸ್‌ಗಳನ್ನು ಬೇರೆಡೆ ಹಾಕಿಸುವ ವ್ಯವಸ್ಥೆ ಮಾಡಲಿ. ಇಲ್ಲವಾದಲ್ಲಿ ಮಾರ್ಗಸೂಚಿಯನ್ನು ವಾಹನ ಸವಾರರಿಗೆ ಅನುಕೂಲವಾಗುವಂತೆ ಮತ್ತೊಂದೆಡೆ ಹಾಕಲಿ - ಯೋಗೀಶ್ ಶಾವಿಗೇಹಳ್ಳಿ
ಬೇಜವಾಬ್ದಾರಿ
ಈ ಬಗ್ಗೆ ಕ್ರಮ ಕೈಗೊಳ್ಳಲು ಹಲವು ಬಾರಿ ಆರೋಗ್ಯ ನಿರೀಕ್ಷಕರಿಗೆ ಹೇಳಿದ್ದೇನೆ. ಆದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದೊಂದು ಗಂಭೀರ ಪ್ರಕರಣ. ಆದಷ್ಟು ಬೇಗ ಕ್ರಮ ಕೈಗೊಳ್ಳಿ ಎಂದು ಹೇಳಿದರೂ ನಾನು ರಜೆಯಲ್ಲಿದ್ದೇನೆ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಾರೆ - ಮಂಜಮ್ಮ, ಪುರಸಭಾ ಮುಖ್ಯಾಧಿಕಾರಿ