
ಚಿಕ್ಕನಾಯಕನಹಳ್ಳಿ: ಪಟ್ಟಣದ ಹಲವು ವಾರ್ಡ್‌ಗಳ ಖಾಲಿ ನಿವೇಶನಗಳು ಕಸದ ತಿಪ್ಪೆಗಳಾಗಿ ಮಾರ್ಪಟ್ಟಿವೆ.
ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಕೇವಲ ಕಸದ ಸಮಸ್ಯೆಯಾಗಿರದೆ ಪುರಸಭೆ ಆಡಳಿತ ವೈಫಲ್ಯಕ್ಕೆ ಹಿಡಿದ ಕನ್ನಡಿಯಂತಿದೆ.
ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಜನ ಮತ್ತು ವ್ಯಾಪಾರಿಗಳು ಮನೆ ಅಥವಾ ಮಳಿಗೆಯ ತ್ಯಾಜ್ಯವನ್ನು ವಿಲೇವಾರಿ ಮಾಡುವ ಸುಲಭ ದಾರಿಯಾಗಿ ಖಾಲಿ ನಿವೇಶನಗಳನ್ನು ಆಯ್ದುಕೊಳ್ಳುತ್ತಿದ್ದಾರೆ. ಮುಂಜಾನೆ ಮತ್ತು ತಡರಾತ್ರಿ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿದ ತ್ಯಾಜ್ಯವನ್ನು ಈ ನಿವೇಶನಗಳಿಗೆ ಎಸೆದು ಹೋಗುವುದು ಈಗ ವಾಡಿಕೆಯಾಗಿದೆ. ಖಾಲಿ ನಿವೇಶನಗಳು ದುರ್ನಾತ ಬೀರುತ್ತಿದ್ದು, ಸೊಳ್ಳೆಗಳ ತಾಣವಾಗಿ ಮಾರ್ಪಟ್ಟಿವೆ. ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಿದೆ.
ನಿವೇಶನಗಳನ್ನು ಖರೀದಿಸಿ ಹಾಗೆಯೇ ಬಿಡುವ ಮಾಲೀಕರು ವರ್ಷಗಟ್ಟಲೆ ಆ ಕಡೆ ಮುಖ ಮಾಡುವುದಿಲ್ಲ. ಜಾಗದ ಸುತ್ತ ತಡೆಗೋಡೆ ಅಥವಾ ಬೇಲಿ ನಿರ್ಮಿಸದ ಪರಿಣಾವು ಅವು ಸಾರ್ವಜನಿಕ ಕಸದ ತೊಟ್ಟಿಗಳಾಗಿ ಪರಿಣಮಿಸಿದೆ. ಮಾಲೀಕರು ಕಾಲಕಾಲಕ್ಕೆ ತಮ್ಮ ಜಾಗ ಸ್ವಚ್ಛಗೊಳಿಸದಿರುವುದು ಈ ಅವ್ಯವಸ್ಥೆಗೆ ಪ್ರಮುಖ ಕಾರಣವಾಗಿದೆ.
ಈ ಹಿಂದೆ ಪಟ್ಟಣಕ್ಕೆ ಭೇಟಿ ನೀಡಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಕಟ್ಟುನಿಟ್ಟಿನ ಆದೇಶ ನೀಡಿದ್ದರು. ‘ಖಾಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದ ಮಾಲೀಕರಿಗೆ ಕೂಡಲೇ ನೋಟಿಸ್ ನೀಡಿ, ದಂಡ ವಿಧಿಸಿ’ ಎಂದು ಸೂಚಿಸಿದ್ದರು. ಆದರೆ ಪುರಸಭೆ ಅಧಿಕಾರಿಗಳು ಈ ಆದೇಶವನ್ನೇ ಗಾಳಿಗೆ ತೂರಿದ್ದಾರೆ. ನೋಟಿಸ್ ನೀಡುವಲ್ಲಿ ತೋರುತ್ತಿರುವ ವಿಳಂಬ ನೀತಿಯಿಂದಾಗಿ ಕಸ ಎಸೆಯುವವರಿಗೆ ಮತ್ತಷ್ಟು ಧೈರ್ಯ ಬಂದಂತಾಗಿದೆ ಎಂದು ಪಟ್ಟಣ ನಿವಾಸಿಗಳು ಆರೋಪಿಸಿದ್ದಾರೆ.
ಯಾವುದೇ ನಗರ ಪ್ರದೇಶದಲ್ಲಿ ಖಾಲಿ ನಿವೇಶನಗಳ ಮಾಲೀಕರು ತಮ್ಮ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕಾನೂನುಬದ್ಧ ಕರ್ತವ್ಯ. ಪುರಸಭೆ ಕೇವಲ ಕರ ವಸೂಲಿ ಮಾಡುವುದಕ್ಕೆ ಸೀಮಿತವಾಗದೆ, ಕರ್ನಾಟಕ ಪುರಸಭೆಗಳ ಕಾಯ್ದೆ ಅಡಿಯಲ್ಲಿ ಸ್ವಚ್ಛತೆ ಕಾಪಾಡದ ಮಾಲೀಕರ ಮೇಲೆ ಕ್ರಮ ಜರುಗಿಸಬೇಕು ಎಂದು ಪಟ್ಟಣದ ಶಶಿಕುಮಾರ್ ಆಗ್ರಹಿಸಿದರು.
ಸ್ಪಂದಿಸದ ಅಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ಹಾಗೂ ಎಂಜಿನಿಯರ್ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದಿರುವುದು ನಾಗರಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲು ಹೋದರೆ ಒಬ್ಬರ ಮೇಲೊಬ್ಬರು ಜವಾಬ್ದಾರಿಯನ್ನು ತಳ್ಳುತ್ತಾ ಜನರನ್ನು ಅಲೆದಾಡಿಸುತ್ತಿದ್ದಾರೆ. ಎಂಜನಿಯರ್ ‘ನಾನೇನು ಮಾಡಲಿ’ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಮೇಲಧಿಕಾರಿಗಳಿಗೆ ಕರೆ ಮಾಡಿದರೆ ಮುಖ್ಯಾಧಿಕಾರಿ ದೂರು ನೀಡದಂತೆ ಜನರಿಗೆ ತಾಕೀತು ಮಾಡುತ್ತಿದ್ದಾರೆ. ತಿಂಗಳು ಕಳೆದರೂ ಸಣ್ಣ ಸಮಸ್ಯೆಗಳನ್ನು ಅಧಿಕಾರಿಗಳು ಬಗೆಹರಿಸುತ್ತಿಲ್ಲ ಎಂದು ಜನರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.