ADVERTISEMENT

ಗುಬ್ಬಿ | ಬಾಲ್ಯ ವಿವಾಹ; ಜನಸಂಖ್ಯೆ ಹೆಚ್ಚಳಕ್ಕೆ ಕಾರಣ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 4:52 IST
Last Updated 13 ಜುಲೈ 2025, 4:52 IST
ಗುಬ್ಬಿಯಲ್ಲಿ ವಿಶ್ವ ಜನಸಂಖ್ಯಾ ದಿನ ಆಚರಿಸಲಾಯಿತು
ಗುಬ್ಬಿಯಲ್ಲಿ ವಿಶ್ವ ಜನಸಂಖ್ಯಾ ದಿನ ಆಚರಿಸಲಾಯಿತು   

ಗುಬ್ಬಿ: ಜನಸಂಖ್ಯೆ ನಿಯಂತ್ರಿಸಲು ಎಲ್ಲರಿಗೂ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಪ್ರಭಾ ತಿಳಿಸಿದರು.

ಪಟ್ಟಣದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜನಸಂಖ್ಯಾ ನಿಯಂತ್ರಣಕ್ಕೆ ಕಡಿವಾಣ ಹಾಕದಿದ್ದಲ್ಲಿ ವೈಯಕ್ತಿಕ ಸಮಸ್ಯೆ ಜೊತೆಗೆ ದೇಶದ ಅಭಿವೃದ್ಧಿ ಕುಂಠಿತಗೊಳ್ಳುವುದು. ಮಹಿಳೆಯರನ್ನು ಮಕ್ಕಳನ್ನು ಹೆರುವ ಯಂತ್ರ ಎಂದು ಭಾವಿಸಬಾರದು. ಬಾಲ್ಯ ವಿವಾಹ ಜನಸಂಖ್ಯೆ ಉತ್ತೇಜನಕ್ಕೆ ಕಾರಣವಾಗುತ್ತಿದೆ ಎಂದರು.

ADVERTISEMENT

ಪ್ರಾಂಶುಪಾಲ ಆರ್.ವಿ. ಚಂದ್ರಶೇಖರ್ ಮಾತನಾಡಿ, ಜನಸಂಖ್ಯೆ ದೇಶದ ಸಂಪನ್ಮೂಲವಾಗಬೇಕೆ ಹೊರತು ಸಮಸ್ಯೆ ಆಗಬಾರದು. ಇದರಿಂದ ದೇಶದ ಅಭಿವೃದ್ಧಿ ಕುಂಠಿತಗೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಾಗುತ್ತದೆ ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿಂದು ಮಾಧವ್ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಫಲವಂತಿಕೆ ಕಡಿಮೆಯಾಗುತ್ತಿದ್ದರೂ ಜನಸಂಖ್ಯೆ ಏರುತ್ತಿರುವುದು ದುರಾದೃಷ್ಟಕರ. ಆರ್ಥಿಕ ಸಾಮರ್ಥ್ಯ ಅರ್ಥೈಸಿಕೊಂಡು ಅಗತ್ಯವಿರುವಷ್ಟು ಮಕ್ಕಳನ್ನು ಪಡೆಯುವತ್ತ ಯೋಚಿಸಬೇಕಿದೆ. ಇಲ್ಲವಾದಲ್ಲಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವ ಜೊತೆಗೆ ದೇಶದ ಆರ್ಥಿಕತೆ ಕುಂಠಿತಗೊಳ್ಳುವುದು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಟರಾಜು ಮಾತನಾಡಿ, ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ. ಜನಸಂಖ್ಯೆ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದರು.

ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ಕೇಶವರಾಜು, ಸಿಡಿಪಿಒ ಕೃಷ್ಣಮೂರ್ತಿ, ಆರೋಗ್ಯ ನೀರಿಕ್ಷಣಾಧಿಕಾರಿ ರಮೇಶ್, ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.