ಮಧುಗಿರಿ: ತಾಲ್ಲೂಕಿನ ಹೂವಿನಹಳ್ಳಿ ಗ್ರಾಮದಲ್ಲಿ ಬಾಲಕಿಗೆ ವಿವಾಹ ನಡೆದಿರುವ ಬಗ್ಗೆ ಭಾವಚಿತ್ರಗಳನ್ನು ಆಧರಿಸಿ ಯುವಕ ಹಾಗೂ ಆತನ ಪೋಷಕರ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಎ.ಅನಿತಾ ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಗ್ರಾಮದ ಬಸ್ತಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಗುರುವಾರ ಬೆಳಿಗ್ಗೆ 5ಕ್ಕೆ ವಿವಾಹ ನಿಗದಿಯಾಗಿತ್ತು. ಆದರೆ ಬುಧವಾರ ರಾತ್ರಿ 10.40 ರಲ್ಲಿ ಬಾಲ್ಯ ವಿವಾಹದ ಬಗ್ಗೆ ಪೊಲೀಸರಿಗೆ ಹಾಗೂ ಅಧಿಕಾರಿಗಳಿಗೆ ಮಾಹಿತಿ ದೊರೆಯಿತು. ಈ ವಿಚಾರ ಅರಿತ ಯುವಕ ಹಾಗೂ ಯುವಕನ ಪೋಷಕರು ಬೇರೆಡೆ ವಿವಾಹ ಮಾಡಿಕೊಂಡಿದ್ದಾರೆ. ಈ ಭಾವಚಿತ್ರಗಳು ಸಿಡಿಪಿಒ ಎ.ಅನಿತಾ ಅವರಿಗೆ ದೊರೆತಿವೆ. ಈ ಭಾವಚಿತ್ರಗಳು ಹಾಗೂ ಕೆಲವರ ಹೇಳಿಕೆ ಆಧಾರಿಸಿ ಯುವಕ, ಯುವಕನ ತಂದೆ, ತಾಯಿ ಹಾಗೂ ಸಂಬಂಧಿಕರ ಮೇಲೆ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ಬಾಲ್ಯ ವಿವಾಹ ನಿಷೇಧ ಹಾಗೂ ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ಕಾಯ್ದೆಯಡಿ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.