ADVERTISEMENT

ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ಅಗತ್ಯ: ಜಿಲ್ಲಾಧಿಕಾರಿ

ಜಿಲ್ಲೆಯ ವಿವಿಧ ಕಡೆಗಳಲ್ಲಿ ಶಿಕ್ಷಕರ ದಿನ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2020, 3:19 IST
Last Updated 6 ಸೆಪ್ಟೆಂಬರ್ 2020, 3:19 IST
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು
ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು   

ತುಮಕೂರು: ಮಕ್ಕಳಿಗೆ ಜಾತಿ– ಭೇದ ಇಲ್ಲದ ಸೋಲು– ಗೆಲುವನ್ನು ಸಮಾನವಾಗಿ ಕಾಣುವಂತಹ ಮೌಲ್ಯಾಧಾರಿತ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಹೇಳಿದರು.

ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಶನಿವಾರ ನಡೆದ ಶಿಕ್ಷಕರ ದಿನ, ಡಾ.ಸರ್ವಪಲ್ಲಿ ರಾಧಾಕೃಷ್ಣನ್ 133ನೇ ಜನ್ಮ ದಿನಾಚರಣೆ ಹಾಗೂ ಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಹೆಚ್ಚಿನ ಅಂಕಗಳಿಸುವ ಶಿಕ್ಷಣಕ್ಕಿಂತ ಸಾಮಾಜಿಕ ಪ್ರಜ್ಞೆ ಮೂಡಿಸುವ ಮೌಲ್ಯಾಧಾರಿತ ಶಿಕ್ಷಣದ ಅವಶ್ಯವಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ನಮಗೆ ತಾಯಿಯೇ ಮೊದಲ ಗುರುವಾದರೂ, ಶೈಕ್ಷಣಿಕ ಜೀವನದಲ್ಲಿ ವಿದ್ಯೆ ಕಲಿಸುವ ಮೂಲಕ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರು ಪ್ರಮುಖ ಪಾತ್ರವಹಿಸುತ್ತಾರೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮನೆಯಿಂದ ಹೊರಗೆ ಹೋಗದ ಪರಿಸ್ಥಿತಿ ಇದೆ. ಸವಾಲುಗಳನ್ನು ಎದುರಿಸುತ್ತ ವಿದ್ಯಾರ್ಥಿಗಳ ಮನಸ್ಸು ಅರ್ಥಮಾಡಿಕೊಂಡು ವಿದ್ಯೆ ಕಲಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ಅಧ್ಯಕ್ಷತೆವಹಿಸಿದ್ದರು. ಮೇಯರ್ ಫರೀದಾ ಬೇಗಂ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ನಂಜಯ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕವಿತಾ, ಉಪಮೇಯರ್ ಶಶಿಕಲಾ, ಜಿ.ಪಂ ಸದಸ್ಯ ವೈ.ಎಚ್.ಹುಚ್ಚಯ್ಯ, ಲಕ್ಷ್ಮಿನರಸಿಂಹೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.