ADVERTISEMENT

ತುಮಕೂರು | ಮಕ್ಕಳ ದಿನ ಆಚರಣೆ: ಗಮನ ಸೆಳೆದ ಪುಟಾಣಿಗಳು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2023, 4:53 IST
Last Updated 21 ನವೆಂಬರ್ 2023, 4:53 IST
ತುಮಕೂರಿನಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು ಮತ್ತು ಪೋಷಕರು
ತುಮಕೂರಿನಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು ಮತ್ತು ಪೋಷಕರು   

ತುಮಕೂರು: ಪುಟ್ಟ ಮಕ್ಕಳು ಒನಕೆ ಓಬವ್ವ, ಕಿತ್ತೂರು ರಾಣಿ ಚೆನ್ನಮ್ಮ, ಯೋಧ, ಶ್ರೀಕೃಷ್ಣ, ಭಾರತ ಮಾತೆಯ ವೇಷ ತೊಟ್ಟು ಮಿಂಚಿದರೆ; ಪೋಷಕರು ತಮ್ಮ ಮಕ್ಕಳ ಪ್ರತಿಭೆ ಕಣ್ತುಂಬಿಕೊಂಡರು.

ಈ ದೃಶ್ಯಗಳು ಕಂಡು ಬಂದಿದ್ದು ನಗರದ ಬಾಲಭವನದಲ್ಲಿ. ಸೋಮವಾರ ಜಿಲ್ಲಾ ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲಾ ಮಟ್ಟದ ಮಕ್ಕಳ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಿದರು.

9ರಿಂದ 16 ವರ್ಷದ ಒಳಗಿನ ಮಕ್ಕಳಿಗಾಗಿ ಶಾಸ್ತ್ರೀಯ ಸಂಗೀತ, ಜನಪದ ನೃತ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಹಿಂದೂಸ್ಥಾನಿ ಸಂಗೀತ, ಸುಗಮ ಸಂಗೀತ, ಮೃದಂಗ, ನಗಾರಿ, ಕೊಳಲು, ಡೊಳ್ಳು, ವಿಜ್ಞಾನದಲ್ಲಿ ಆವಿಷ್ಕಾರ ಹಾಗೂ ಚಿತ್ರಕಲಾ ಸ್ಪರ್ಧೆಗಳು ನಡೆದವು.

ADVERTISEMENT

ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಜಿಲ್ಲೆಯಲ್ಲಿ 3.19 ಲಕ್ಷ ಶಾಲಾ ವಿದ್ಯಾರ್ಥಿಗಳು, 1.30 ಲಕ್ಷ ಅಂಗನವಾಡಿ ಮಕ್ಕಳಿದ್ದಾರೆ. ಮಕ್ಕಳಲ್ಲಿ ಅಪೌಷ್ಟಿಕತೆ ದೂರ ಮಾಡಲು, ಆರೋಗ್ಯವಂತ ಮಗುವಿಗೆ ಜನ್ಮ ನೀಡಲಿ ಎಂದು ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರದ ಕಿಟ್‌ ವಿತರಿಸಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ, ‘ಮಕ್ಕಳು ದೇಶಕ್ಕಾಗಿ ಶ್ರಮಿಸಿದ ಮಹನೀಯರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಮಾದರಿಯಾಗಿರಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸನ್ಮಾರ್ಗದಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಬೇಕು’ ಸಲಹೆ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಂ.ಎಸ್‌.ಶ್ರೀಧರ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರಾ, ಕಾರ್ಯಕ್ರಮ ನಿರೂಪಣಾಧಿಕಾರಿ ದಿನೇಶ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.