ADVERTISEMENT

ತುಮಕೂರು: ಮುಚ್ಚುವ ಹಂತದಲ್ಲಿ ಚಿತ್ರಕಲಾ ವಿದ್ಯಾಲಯ

ಜಿಲ್ಲೆಯ ಏಕೈಕ ಸರ್ಕಾರಿ ಚಿತ್ರಕಲಾ ಕಾಲೇಜು

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 6:30 IST
Last Updated 10 ಜನವರಿ 2022, 6:30 IST
ತುಮಕೂರಿನ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ
ತುಮಕೂರಿನ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯ   

ತುಮಕೂರು: ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಜಿಲ್ಲೆಯ ಏಕೈಕ ಸರ್ಕಾರಿ ಚಿತ್ರಕಲಾ ಕಾಲೇಜು ಎಂಬ ಹೆಗ್ಗಳಿಕೆ ಪಡೆದಿರುವ ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯವನ್ನು ಉಳಿಸಿಕೊಂಡು ಹೋಗುವಲ್ಲಿ ಸರ್ಕಾರ ತಾತ್ಸಾರ ಭಾವನೆ ತೋರಿದಂತೆ ಕಾಣುತ್ತಿದೆ.

ಅತ್ಯಂತ ವಿಶಿಷ್ಟ ಕಲೆಯಾದ ಚಿತ್ರಕಲೆಯ ಬಗ್ಗೆ ಆಸಕ್ತಿಯಿರುವ ಯುವಕರಿಗೆ ಪದವಿ ಶಿಕ್ಷಣ ನೀಡುವ ಉದ್ದೇಶದಿಂದ 1993 ರಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಶುರುವಾದ ಚಿತ್ರಕಲಾ ಮಹಾವಿದ್ಯಾಲಯ ಮೂಲ ಸೌಲಭ್ಯಗಳಿಲ್ಲದೆ ಕುಂಟುತ್ತಾ ಸಾಗುತ್ತಿದೆ.

ಇಡೀ ರಾಜ್ಯದಲ್ಲಿ ಚಿತ್ರಕಲೆಯ ಪದವಿ ನೀಡುವ ಸರ್ಕಾರಿ ಕಾಲೇಜುಗಳು ಧಾರವಾಡ ಮತ್ತು ತುಮಕೂರು ಜಿಲ್ಲೆಗಳಲ್ಲಿ ಮಾತ್ರ ಇವೆ. ತುಮಕೂರು ಜಿಲ್ಲೆಯ ಸುತ್ತಮುತ್ತಲಿನ ಜಿಲ್ಲೆಗಳ ಆಸಕ್ತ ವಿದ್ಯಾರ್ಥಿಗಳು ಚಿತ್ರಕಲೆಯ ಪದವಿ ಪಡೆಯಲು ಇದೇ ಕಾಲೇಜಿಗೆ ಬರುತ್ತಾರೆ. ಆದರೆ ಬರುವ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆ ಒಂದೆಡೆಯಾದರೆ, ಸೂಕ್ತ ಮಾರ್ಗದರ್ಶನ ನೀಡಿ, ಅವರನ್ನು ತಿದ್ದಿ ತೀಡಲು ಶಿಕ್ಷಕರೇ ಇಲ್ಲದಂತಾಗಿದೆ.

ADVERTISEMENT

ಸುಮಾರು 28 ವರ್ಷಗಳ ಹಳೆಯದಾದ ಕಾಲೇಜಿಗೆ ಮೂಲ ಸೌಲಭ್ಯಗಳೇ ಇಲ್ಲ. ಕಾಲೇಜಿನ ಕಟ್ಟಡ ತುಂಬಾ ಹಳೆಯದಾಗಿದ್ದು, ಎಲ್ಲ ಕೊಠಡಿಗಳ ಚಾವಣಿ ಕುಸಿದ ಪರಿಣಾಮ ಮಳೆಗಾಲದಲ್ಲಿ ಕೊಠಡಿಗಳು ಸೋರುತ್ತಿವೆ. ಚಿತ್ರಕಲೆಯ ಕುರಿತು ಆಸಕ್ತಿವಹಿಸಿ, ಕಲೆಯನ್ನು ವಿದ್ಯಾಲಯಗಳ ಮೂಲಕ ಕಲಿಯಲು ಬರುವ ಯುವ ಸಮೂಹ ಕಾಲೇಜಿನ ಸ್ಥಿತಿ ನೋಡಿ ನೋಂದಣಿಯಾಗದೇ ವಾಪಸ್‌ ಹೋಗುತ್ತಿದ್ದಾರೆ ಎಂದು ಪ್ರಾಂಶುಪಾಲರು ಬೇಸರ ವ್ಯಕ್ತಪಡಿಸಿದರು.

ಹೆಸರಿಗೆ ಮಾತ್ರ ಮಹಾವಿದ್ಯಾಲಯ ಎನ್ನುವ ಹಾಗಿದೆ ಕಾಲೇಜಿನ ಪರಿಸ್ಥಿತಿ. ನಗರದ ಕೇಂದ್ರ ಭಾಗವಾದ ಜಿಲ್ಲಾ ಕ್ರೀಡಾಂಗಣದಲ್ಲಿಯೇ ಕಾಲೇಜಿದ್ದರೂ, ಅಗತ್ಯವಾಗಿ ಬೇಕಾದ ಕೊಠಡಿಗಳು, ಶಿಕ್ಷಕರ ನೇಮಕಾತಿ ಸೇರಿದಂತೆ ಮೂಲ ಸೌಲಭ್ಯಗಳೇ ದೊರೆಯದಾಗಿವೆ. ಕಾಲೇಜು ಮುಚ್ಚುವ ಹಂತಕ್ಕೆ ತಲುಪಿದರೂ, ಹಲವಾರು ಬಾರಿ ಶಿಕ್ಷಕರು ಮನವಿ ಮಾಡಿದರೂ, ಇದರ ಕುರಿತು ಸರ್ಕಾರ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಗಮನ ಹರಿಸದಿರುವುದು ವಿಪರ್ಯಾಸ.

ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಸುಮಾರು ನಾಲ್ಕು ವರ್ಷದಿಂದ ಕೇವಲ ಒಬ್ಬ ಖಾಯಂ ಶಿಕ್ಷಕರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಬೋಧನೆಯ ಜೊತೆಗೆ ಗುಮಾಸ್ತ ಕೆಲಸ, ಕಾಲೇಜಿನ ಆರವರಣ ಸ್ವಚ್ಛಗೊಳಿಸುವುದು ಸೇರಿದಂತೆ ಎಲ್ಲ ಕೆಲಸಗಳನ್ನು ಕಾಲೇಜಿನ ಪ್ರಾಂಶುಪಾಲ ಚನ್ನಪ್ಪ ಬಾರಕೇರ ಅವರೇ ಮಾಡುತ್ತಿದ್ದಾರೆ. ಇವರು ಈ ಹಿಂದೆ ಧಾರವಾಡ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದರು, ಶಿಕ್ಷಕರ ಕೊರತೆಯಿಂದಾಗಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ. ವಿಶಿಷ್ಟ ಕಲೆಯ ಬಗ್ಗೆ ಆಸಕ್ತಿ ಬೆಳಸಿಕೊಂಡು ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಶಿಕ್ಷಕರ ಕೊರತೆಯೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದರಿಂದಾಗಿ ಕಾಲೇಜಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಇಳಿಮುಖವಾಗತೊಡಗಿದೆ. ಸದ್ಯ ಕಾಲೇಜಿನಲ್ಲಿ 15 ಮಂದಿ ಚಿತ್ರಕಲಾ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ನಾಲ್ಕು ವರ್ಷದ ಪದವಿಗೆ ತರಗತಿಗೆ ಒಬ್ಬರಂತೆ ಆದರೂ ಕನಿಷ್ಠ 4 ಜನ ಶಿಕ್ಷಕರ ಅವಶ್ಯಕತೆಯಿದೆ. ಆದರೆ ನಾಲ್ಕು ತರಗತಿಗಳ 15 ವಿಷಯಗಳನ್ನು ಒಬ್ಬರೇ ಶಿಕ್ಷಕರು ಬೋಧಿಸಬೇಕಾದ ಅನಿವಾರ್ಯತೆ ಸೃಷ್ಠಿಯಾಗಿದೆ. ಈ ಹಿಂದೆ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರನ್ನೇ ಕಾಲೇಜಿಗೆ ನೇಮಕ ಮಾಡಿಕೊಳ್ಳಲಾಗಿತ್ತು. ಸದ್ಯ ಯಾವುದೇ ಸಿಬ್ಬಂದಿ ಇಲ್ಲದೆ ಚಿತ್ರಕಲಾ ಕಾಲೇಜು ಅನಾಥವಾಗಿದೆ.

ಖಾಸಗಿ ಕಾಲೇಜಿಗೆ ಸೇರಲು ಆಗದ ಬಡ ವಿದ್ಯಾರ್ಥಿಗಳಿಗೆ ನೆರವಾಗಬೇಕಿದ್ದ ಸರ್ಕಾರಿ ಕಾಲೇಜು ಸರಿಯಾದ ಕೊಠಡಿಯೂ ಇಲ್ಲದೆ, ಬೋಧನೆ ಮಾಡಲು ಶಿಕ್ಷಕರ ನೇಮಕಾತಿಯೂ ಆಗದೆ, ವಿದ್ಯಾರ್ಥಿಗಳ ನೋಂದಣಿಯೂ ಕುಸಿತಗೊಂಡಿದ್ದರಿಂದ ಇಂದೋ–ನಾಳೆಯೋ ಮುಚ್ಚುವ ಹಂತಕ್ಕೆ ಬಂದು ತಲುಪಿದೆ. ಇಂತಹ ವಿಭಿನ್ನ ವಿಭಾಗಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಿ, ಕಾಲೇಜುಗಳ ಉಳಿವಿಗೆ ಮುಂದಾಗಬೇಕಿದೆ.

ಮೂಲ ಸೌಲಭ್ಯ ಕೊರತೆ
ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಗೋವಾ, ಬೆಂಗಳೂರು, ಬಾಗಲಕೋಟೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಕ್ಕಳು ಕಲಿಯಲು ಬರುತ್ತಾರೆ. ಕಾಲೇಜಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಹತ್ತಾರು ಬಾರಿ ಮನವಿ ಮಾಡಿದರೂ,‌ ಅಧಿಕಾರಗಳು ಸ್ಪಂದಿಸುತ್ತಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಬೇಕಾದ ಯಾವುದೇ ಸೌಲಭ್ಯಗಳಿಲ್ಲ. ಇದರಿಂದ ಕಾಲೇಜಿಗೆ ಬರುವ ಮಕ್ಕಳಿಗೆ ಅವರ ನಿರೀಕ್ಷೆಯಂತೆ ಕಲಿಸಲು ಆಗುತ್ತಿಲ್ಲ ಎಂದು ಕಾಲೇಜಿನ ಪ್ರಾಂಶುಪಾಲ ಚನ್ನಪ್ಪ ಬಾರಕೇರ ಅವರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.