
ತುಮಕೂರು: ಕ್ರಿಸ್‌ಮಸ್ ಹಬ್ಬದ ಮುನ್ನ ದಿನವಾದ ಬುಧವಾರ ನಗರದ ವಿವಿಧೆಡೆ ಯೇಸುಕ್ರಿಸ್ತನ ಸಂದೇಶ ಸಾರುವ ಮೂಲಕ ಕ್ರಿಸ್‌ಮಸ್ ಆಚರಣೆಗೆ ಚಾಲನೆ ನೀಡಲಾಯಿತು.
ಯುನೈಟೆಡ್ ಕ್ರಿಶ್ಚಿಯನ್ ವೆಲ್ಫೇರ್ ಅಸೋಸಿಯೇಷನ್, ಬ್ಲಸೆಟ್ ಸಂಸ್ಥೆ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಗರದ ಟೌನ್‍ಹಾಲ್ ವೃತ್ತ, ಚರ್ಚ್ ಸರ್ಕಲ್, ಎಸ್.ಎಸ್.ವೃತ್ತದಲ್ಲಿ ಯೇಸುಕ್ರಿಸ್ತನ ಶಾಂತಿ ಸಂದೇಶವನ್ನು ಜನರಿಗೆ ತಲುಪಿಸಲಾಯಿತು. ಮಕ್ಕಳು ನೃತ್ಯ, ನಾಟಕ, ಹಾಡುಗಳ ಮೂಲಕ ಗಮನ ಸೆಳೆದರು.
ನಗರದ ಟೌನ್‍ಹಾಲ್ ವೃತ್ತದಲ್ಲಿ ಕ್ರಿಸ್‍ಮಸ್ ಆಚರಣೆ, ಯೇಸುಕ್ರಿಸ್ತನ ಸಂದೇಶ ಸಾರಲು ವಿವಿಧ ಚರ್ಚ್‍ಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಪ್ರಮುಖರಾದ ಜಫಿನ್ ಜಾಯ್, ‘ಯಾವುದೇ ಜಾತಿ, ಕುಲ, ಗೋತ್ರ ಇಲ್ಲದೆ ಎಲ್ಲರೂ ಸಹಬಾಳ್ವೆಯಿಂದ ಬದುಕು ನಡೆಸುವ ಮೂಲಕ ಶಾಂತಿ ಕಾಪಾಡಬೇಕು. ಮರಣ ಎನ್ನುವುದು ಯೇಸುವಿನ ಜೀವಿತದಲ್ಲಿ ಕೊನೆಯಲ್ಲ. ಆತ ಸತ್ತ ಮೂರನೇ ದಿನ ಪುನರುತ್ಥಾನನಾದನು. ನಂತರ ತನ್ನ ಶಿಷ್ಯರಿಗೆ ಪ್ರತ್ಯಕ್ಷನಾದ. ಪುನರುತ್ಥಾನವಾದ 40 ದಿನಗಳ ನಂತರ ಯೇಸು ಸ್ವರ್ಗಾರೋಹಣನಾದನು’ ಎಂದು ಹೇಳಿದರು.
ಯುನೈಟೆಡ್ ಕ್ರಿಶ್ಚಿಯನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಯು.ಜಿ.ಜಾಯ್ ಕುಟ್ಟಿ, ಪಾಸ್ಟರ್ ಮತಾಯಿಸ್, ರಾಬಿನ್‍ಸನ್, ದೇವರಾಜು, ಮಾಜಿ ಶಾಸಕ ರಫೀಕ್ ಅಹಮದ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.