ADVERTISEMENT

ಜನರಿಕ್ ಮಾತ್ರೆ ಪೂರೈಕೆಗೆ ಆಗ್ರಹ

ಆದಷ್ಟು ಬೇಗ ಅಗತ್ಯ ಮಾತ್ರೆಗಳ ಪೂರೈಕೆಗೆ ಸಿಪಿಎಂ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 16:10 IST
Last Updated 7 ಏಪ್ರಿಲ್ 2020, 16:10 IST

ತುಮಕೂರು: ನಗರವೂ ಸೇರಿದಂತೆ ಜಿಲ್ಲೆಯಲ್ಲಿ ಇರುವ ಜನರಿಕ್ ಔಷಧಿ ಮಳಿಗೆಗಳಲ್ಲಿ ಮಾತ್ರೆಗಳು ದೊರೆಯದೆ ರೋಗಿಗಳು ಪರದಾಡುತ್ತಿದ್ದಾರೆ. ಶೀಘ್ರ ಮಾತ್ರೆಗಳನ್ನು ಪೂರೈಕೆ ಮಾಡಬೇಕು ಎಂದು ಸಿಪಿಎಂ, ಸಿಐಟಿಯು ಜಿಲ್ಲಾ ಘಟಕ ಒತ್ತಾಯಿಸಿದೆ.

ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಸೇರಿದಂತೆ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಮಾತ್ರೆಗಳು ದೊರೆಯುತ್ತಿಲ್ಲ. ಜನರಿಕ್ ಮಳಿಗೆಗಳಲ್ಲಿ ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ಬೆಲೆಗೆ ದೊರೆಯುವ ಮಾತ್ರೆಗಳನ್ನೇ ಸರ್ಕಾರ ಪೂರೈಕೆ ಮಾಡದಿರುವುದನ್ನು ಖಂಡಿಸಿದೆ.

ಜಿಲ್ಲಾ ಆಸ್ಪತ್ರೆಯಲ್ಲಿರುವ ಜನರಿಕ್ ಔಷಧಿ ಮಳಿಗೆಯೂ ಸೇರಿದಂತೆ ನಗರ ವ್ಯಾಪ್ತಿಯಲ್ಲಿರುವ ಜನರಿಕ್ ಮಳಿಗೆಗಳನ್ನು ಮುಚ್ಚಲಾಗಿದೆ. ಔಷಧಿ ಅಂಗಡಿಗಳಲ್ಲಿ ನಾಲ್ಕೈದು ಪಟ್ಟು ಹೆಚ್ಚಿಗೆ ಹಣ ತೆತ್ತು ಪಡೆಯಬೇಕಿದೆ. ಹೆಚ್ಚು ಬೆಲೆಯಿಂದಾಗಿ ಮಾತ್ರೆಗಳು ಬಡವರ ಕೈಗೆಟುಕದಂತಾಗಿವೆ ಎಂದು ಹೇಳಿದೆ.

ADVERTISEMENT

ಜನರಿಕ್ ಮಳಿಗೆಗಳಲ್ಲಿ ಮಾತ್ರೆ ಸಿಗದಿರುವುದನ್ನು ನೋಡಿದರೆ ಖಾಸಗಿಯವರ ಲಾಬಿಗೆ ಸರ್ಕಾರ ಮಣಿದಿದೆಯೇ ಎಂಬ ಅನುಮಾನ ಮೂಡುತ್ತಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ನಗರ ಕಾರ್ಯದರ್ಶಿ ಎಸ್.ರಾಘವೇಂದ್ರ, ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ತಾಲ್ಲೂಕು ಘಟಕದ ಅಧ್ಯಕ್ಷ ಷಣ್ಮುಖಪ್ಪ, ಜಿಲ್ಲಾ ಖಜಾಂಚಿ ಲೋಕೇಶ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.