ADVERTISEMENT

ತುಮಕೂರು: ಗುಂಡಿಗಳ ರೂಪ ತಾಳಿದ ನಗರದ ರಸ್ತೆಗಳು

ಕೆ.ಜೆ.ಮರಿಯಪ್ಪ
Published 26 ಆಗಸ್ಟ್ 2021, 9:29 IST
Last Updated 26 ಆಗಸ್ಟ್ 2021, 9:29 IST
ಕುಸಿದು ಬಿದ್ದಿರುವ ಯುಜಿಡಿ
ಕುಸಿದು ಬಿದ್ದಿರುವ ಯುಜಿಡಿ   

ತುಮಕೂರು: ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳಿಂದಾಗಿ ನಗರದ ಜನತೆ ಹೈರಾಣಾಗಿದ್ದು, 24X7 ಕುಡಿಯುವ ನೀರಿನ ಕಾಮಗಾರಿ ಹಾಗೂ ಎರಡನೇ ಹಂತದ ಯುಜಿಡಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೆ ಮತ್ತಷ್ಟು ಸಂಕಷ್ಟಕ್ಕೆ ದೂಡಿವೆ.

ಬಹುತೇಕ ಕಾಮಗಾರಿಗಳು ಸಕಾಲಕ್ಕೆ ಪೂರ್ಣಗೊಳ್ಳದೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತಿವೆ. ಯೋಜನೆ ರೂಪಿಸುವ ಸಮಯದಲ್ಲೇ ಸಾಕಷ್ಟು ತಡವಾಗಿರುತ್ತದೆ. ಇನ್ನೂ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ, ಅನುಮೋದನೆ ಪಡೆದು, ಟೆಂಡರ್ ಕರೆದು ಕೆಲಸ ಪ್ರಾರಂಭಿಸಲು ಹಲವು ತಿಂಗಳುಗಳೇ ಕಳೆದು ಹೋಗಿರುತ್ತದೆ. ಕೆಲಸ ಆರಂಭಿಸದ ಮೇಲೆ ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸಲು ಗುತ್ತಿಗೆದಾರರ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಆದರೆ ಒಪ್ಪಂದ ಜಾರಿಗೂ ಬರುವುದಿಲ್ಲ, ಅನ್ವಯವೂ ಆಗುವುದಿಲ್ಲ ಎಂಬಂತೆ ಕೆಲಸ ನಡೆಯುತ್ತದೆ. ನಗರದಲ್ಲೂ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ.

ಅದಕ್ಕೆ ತಾಜ ಉದಾಹರಣೆ ಕುಡಿಯುವ ನೀರಿನ ಯೋಜನೆ ಹಾಗೂ ಯುಜಿಡಿ ಕಾಮಗಾರಿಗಳು. ಅತ್ಯಾಧುನಿಕ ಯಂತ್ರೋಪಕರಣಗಳು, ನವೀನ ಮಾದರಿಯ ಸಲಕರಣೆಗಳನ್ನು ಹೊಂದಿರುವ ಈ ಸಮಯದಲ್ಲೂ ನಿಗದಿತ ಸಮಯಕ್ಕೆ ಕೆಲಸ ಮುಗಿಸಲು ಸಾಧ್ಯವಾಗುತ್ತಿಲ್ಲ. ಈ ಎರಡೂ ಕಾಮಗಾರಿಯನ್ನು ಕರ್ನಾಟಕ ನೀರು ಸರಬ
ರಾಜು ಹಾಗೂ ಒಳಚರಂಡಿ ಮಂಡಳಿನಿರ್ವಹಿಸುತ್ತಿದ್ದು, ಉಸ್ತುವಾರಿಯನ್ನು ಮಹಾನಗರ ಪಾಲಿಕೆ ನೋಡಿಕೊಳ್ಳುತ್ತಿದೆ. ಆಸಕ್ತಿ ತೋರದ ಅಧಿಕಾರಿಗಳು, ಜವಾಬ್ದಾರಿ ನಿರ್ವಹಿಸದ ಜನಪ್ರತಿನಿಧಿಗಳ ಕಾರ್ಯ ವಿಧಾನದಿಂದಾಗಿ ಎಂಟತ್ತು ವರ್ಷಗಳಾದರೂ ಕೆಲಸ ಮುಕ್ತಾಯದ ಹಂತ ತಲುಪಿಲ್ಲ.

ADVERTISEMENT

ಯುಜಿಡಿ ಕಾಮಗಾರಿ 2013ರಲ್ಲಿ ಆರಂಭವಾಗಿದ್ದು, ಪೂರ್ಣಗೊಂಡು ಎರಡು ವರ್ಷಗಳಾಗಬೇಕಿತ್ತು. ಕೆಲಸಕ್ಕೆ ಚಾಲನೆ ಸಿಕ್ಕು ಎಂಟು ವರ್ಷಗಳು ಕಳೆದರೂ ಈವರೆಗೂ ತೆವಳುತ್ತಲೇ ಸಾಗಿದೆ. ‘ಕಾಮಗಾರಿಯನ್ನು ಸಮರ್ಪಕ
ವಾಗಿ ನಿರ್ವಹಿಸಿಲ್ಲ, ಗುಣಮಟ್ಟ ಕಾಪಾಡಿಲ್ಲ. ಯುಜಿಡಿ ಕೊಳಚೆ ಹರಿದು ಹೋಗಲು ಸರಿಯಾದ ಮಾರ್ಗದಲ್ಲಿ ಸಂಪರ್ಕವನ್ನು ಕಲ್ಪಿಸಿಲ್ಲ. ಹಲವು ಕಡೆಗಳಲ್ಲಿ ಮಳೆ ನೀರು ಹರಿದು ಹೋಗುವ ಚರಂಡಿಗೆ ಬಿಡಲಾಗಿದೆ. ಶುದ್ಧ ನೀರಿನೊಂದಿಗೆ ಕೊಳಚೆ ಬೆರೆತು ಕೆರೆ ಸೇರುತ್ತಿದೆ. ಇದೇ ನೀರು ಅಂತರ್ಜಲ ಸೇರಿ ಜಲಮೂಲವನ್ನು ಕಲುಷಿತಗೊಳಿಸುತ್ತಿದೆ. ದಿನಗಳು ಕಳೆದಂತೆ ಅಂತರ್ಜಲವೂ ಕಲುಷಿತವಾಗುತ್ತಿದೆ. ಅವೈಜ್ಞಾನಿಕವಾಗಿ ಕಾಮಗಾರಿ ನಿರ್ವಹಿಸಲಾಗುತ್ತಿದೆ’ ಎಂದು ಪಾಲಿಕೆ ಸದಸ್ಯರು ಆರೋಪಿಸುತ್ತಿದ್ದಾರೆ.

24X7 ನೀರು ಒದಗಿಸುವ ಕೆಲಸ 2017ರಲ್ಲಿ ಆರಂಭವಾಗಿದ್ದು, ಇನ್ನೂ ಮುಕ್ತಾಯದ ಸೂಚನೆಗಳು ಕಾಣುತ್ತಿಲ್ಲ. ಕೆಲಸ ಆಮೆ ವೇಗದಲ್ಲಿ ಸಾಗಿದೆ. ಕುಡಿಯುವ ನೀರಿಗಾಗಿ ಪೈಪ್‌ಲೈನ್ ಅಳವಡಿಕೆ ಹಾಗೂ ಇತರ ಕಾಮಗಾರಿ ನಿರ್ವಹಿಸಲು ರಸ್ತೆ, ಚರಂಡಿಗಳನ್ನು ಅಗೆದು ನಾಲ್ಕು ವರ್ಷ ಕಳೆದಿದ್ದರೂ ವೈಜ್ಞಾನಿಕವಾಗಿ ಮುಚ್ಚಿಲ್ಲ. ಕೆಲಸ ತಡವಾದಷ್ಟು ಯೋಜನಾ ವೆಚ್ಚವೂ ಹೆಚ್ಚುತ್ತಲೇ ಸಾಗುತ್ತದೆ. ಇದು ಗುತ್ತಿಗೆ ಪಡೆದ ಕಂಪನಿಗಳಿಗೆ ಒಂದು ರೀತಿಯಲ್ಲಿ ಪರೋಕ್ಷ ನೆರವು ಸಿಕ್ಕಂತಾಗುತ್ತದೆ.

ವಾಹನ ಸವಾರರು, ಪಾದಚಾರಿಗಳು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ. ಮಳೆ ಬಂದು, ನೀರು ನಿಂತು ಗುಂಡಿಗಳು ಕಾಣದೆ ವಾಹನಗಳು ಬಿದ್ದು ಸಾಕಷ್ಟು ಅನಾಹುತಗಳು ಸಂಭವಿಸಿವೆ. ದಾರಿ ಕಾಣದೆ ಕೊನೆಗೆ ಮಹಾನಗರ ಪಾಲಿಕೆ ಸದಸ್ಯರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ ಕಚೇರಿಗೆ ಮುತ್ತಿಗೆಹಾಕಿ ಪ್ರತಿಭಟನೆ ನಡೆಸಬೇಕಾಯಿತು. ಆದರೂ ಸರಿಪಡಿಸುವ ಪ್ರಯತ್ನ ಮಾತ್ರ ನಡೆದಿಲ್ಲ.

ಕಳಪೆ ಕಾಮಗಾರಿ: ‘ಯುಜಿಡಿ ಹಾಗೂ ಕುಡಿಯುವ ನೀರಿನ ಕಾಮಗಾರಿ ಕಳಪೆ ಗುಣಮಟ್ಟದಿಂದ ಕೂಡಿದೆ. ಗುತ್ತಿಗೆ ಸಮಯದಲ್ಲಿ ನಿಗದಿಪಡಿಸಿದ ಗುಣಮಟ್ಟದ ಸಾಮಗ್ರಿಗಳನ್ನು ಬಳಸುತ್ತಿಲ್ಲ. ಬ್ರ್ಯಾಂಡೆಡ್ ಕಂಪನಿಯ ವಸ್ತುಗಳನ್ನೇ ಬಳಸಬೇಕಿದ್ದರೂ, ಮಣ್ಣಿನ ಒಳಗೆ ಯಾರಿಗೂ ಕಾಣುವುದಿಲ್ಲ, ಕೆಲಸ ಮುಗಿಸಿ, ಹಣ ಪಡೆದುಕೊಂಡರೆ ನಮ್ಮ ಕೆಲಸ ಮುಗಿಯಿತು. ನಂತರ ನಮ್ಮನ್ನು ಯಾರು ಕೇಳುತ್ತಾರೆ ಎಂದು ಕಳಪೆ ಕಾಮಗಾರಿ ನಡೆಸಿದ್ದಾರೆ. ಇದರಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಪಾಲೂ ಇದೆ’ ಎಂಬ ಆರೋಪ ಕೇಳಿಬಂದಿದೆ.

ನೀರು, ಯುಜಿಡಿಗೆ ₹351 ಕೋಟಿ

24X7 ಕುಡಿಯುವ ನೀರು ಒದಗಿಸಲು ₹198.98 ಕೋಟಿ ವೆಚ್ಚ ಮಾಡಲಾಗುತ್ತಿದೆ. ಅದರಲ್ಲಿ ಶೇ 10ರಷ್ಟು ಹಣವನ್ನು ಮಹಾನಗರ ಪಾಲಿಕೆ ನೀಡಿದೆ. ಅಮೃತ ಯೋಜನೆಯನ್ನು ₹113.28 ಕೋಟಿ ವೆಚ್ಚದಲ್ಲಿ ಜಾರಿಮಾಡಿದ್ದು, ಪಾಲಿಕೆ ಶೇ 30ರಷ್ಟು ಹಣ ಕೊಡಲಿದೆ. ಈ ಎರಡು ಯೋಜನೆಗಳಿಂದ ಒಟ್ಟು ₹312.26 ಕೋಟಿ ಮೊತ್ತದ ಕಾಮಗಾರಿಗಳು ನಡೆದಿವೆ.

₹39.27 ಕೋಟಿ ವೆಚ್ಚದಲ್ಲಿ ಯುಜಿಡಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಪಾಲಿಕೆ ವಂತಿಗೆಯಾಗಿ ಶೇ 30ರಷ್ಟು ಹಣ ನೀಡಲಿದೆ. ಕುಡಿಯುವ ನೀರು, ಯುಜಿಡಿ ಎರಡೂ ಯೋಜನೆಯ ಒಟ್ಟು ಮೊತ್ತ ₹351.53 ಕೋಟಿ.

ಇಷ್ಟೊಂದು ದೊಡ್ಡ ಮೊತ್ತ ಖರ್ಚುಮಾಡಿ, ಕುಡಿಯುವ ನೀರು, ಯುಜಿಡಿ ಕಾಮಗಾರಿ ಆರಂಭಿಸಲಾಗಿದೆ. ಅನುಷ್ಠಾನದ ಹಂತದಲ್ಲಿ ಇದ್ದರೂ ಸರಿಯಾದ ಉಸ್ತುವಾರಿಯೇ ಇಲ್ಲವಾಗಿದೆ. ಎಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ. ಜನರ ತೆರಿಗೆ ಹಣ ಕೊಳಚೆ ನೀರಿನಲ್ಲಿ ಹರಿದು ಹೋಗುತ್ತಿದ್ದರೂ ಗಮನಕೊಡುವವರೇ ಇಲ್ಲವಾಗಿದ್ದಾರೆ.

ಎಲ್ಲವೂ ಅವ್ಯವಸ್ಥೆ

ನಿಯಂತ್ರಣವೇ ಇಲ್ಲದೆ ಮನಸ್ಸಿಗೆ ಬಂದಂತೆ ಕೆಲಸ ಮಾಡಲಾಗಿದೆ. ನಗರದ ಗಾರ್ಡನ್ ರಸ್ತೆಯಲ್ಲಿ ಕೆಲವೇ ತಿಂಗಳ ಹಿಂದೆ ₹2 ಕೋಟಿ ವೆಚ್ಚದಲ್ಲಿ ಒಳಚರಂಡಿ ನಿರ್ಮಿಸಲಾಗಿದೆ. ಈಗಾಗಲೇ ಕುಸಿದು ಹಾಳಾಗಿವೆ. ಕೋಟ್ಯಂತರ ರೂಪಾಯಿ ವೆಚ್ಚಮಾಡಿದ್ದು ವ್ಯರ್ಥ್ಯವಾಗಿದೆ.

ಎಷ್ಟು ಬಾರಿ ಒತ್ತಾಯ ಮಾಡಿದರೂ ಸಬೂಬು ಹೇಳಿಕೊಂಡು ಬರುತ್ತಿದ್ದಾರೆ. ಸಕಾಲದಲ್ಲಿ ಕೆಲಸ ಪೂರ್ಣಗೊಳಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಯೋಜನಾ ಮೊತ್ತವನ್ನು ಪರಿಷ್ಕರಿಸಬಾರದು. ತಡವಾಗಿರುವುದಕ್ಕೆ ದಂಡ ವಸೂಲಿ ಮಾಡಬೇಕು.

-ಜೆ.ಕುಮಾರ್, ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ

ನೋಟಿಸ್ ಜಾರಿ

ಯುಜಿಡಿ, 24X7 ಕುಡಿಯುವ ನೀರಿನ ಕಾಮಗಾರಿಯನ್ನು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯವರು ನಿರ್ವಹಿಸುತ್ತಿದ್ದಾರೆ. ಕಾಮಗಾರಿ ತಡವಾಗಿರುವುದು, ಅಗೆದ ಗುಂಡಿಗಳನ್ನು ಸರಿಯಾಗಿ ಮುಚ್ಚದಿರುವುದು ಕಂಡುಬಂಡಿದ್ದು, ನೋಟಿಸ್ ನೀಡಲಾಗಿದೆ.

ಪೈಪ್‌ಲೈನ್ ಅಳವಡಿಸಲು ಅಗೆದಿರುವ ಗುಂಡಿಗಳನ್ನು ಸಮರ್ಪಕವಾಗಿ ಮುಚ್ಚಿಲ್ಲ. ಸೆಪ್ಟೆಂಬರ್ ಒಳಗೆ ಪೂರ್ಣಗೊಳಿಸುವುದಾಗಿ ಹೇಳಿದ್ದಾರೆ.

-ರೇಣುಕಾ, ಪಾಲಿಕೆ ಆಯುಕ್ತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.