
ಕೊರಟಗೆರೆ: ಸರ್ಕಾರದಲ್ಲಿ ಗುಂಡಿ ಮುಚ್ಚಲು ಹಣವಿಲ್ಲ. ಅಭಿವೃದ್ಧಿ ಕಡೆಗೆ ಗಮನ ಹರಿಸಬೇಕಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೀದಿ ಜಗಳ ಮಾಡುತ್ತಿದ್ದಾರೆ ಎಂದು ಶಾಸಕ ಬಿ.ಸುರೇಶ್‌ಗೌಡ ಆರೋಪಿಸಿದರು.
ತಾಲ್ಲೂಕಿನ ಮಾವತ್ತೂರು ಗ್ರಾಮದಲ್ಲಿ ಸೋಮವಾರ ಸಂಜೆ ನಡೆದ ಗಂಗಾರತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರದ ಪರಿಸ್ಥಿತಿ ನವೆಂಬರ್ ಕ್ರಾಂತಿ, ಡಿಸೆಂಬರ್ ಶಾಂತಿ, ಜನವರಿ ವಾಂತಿ ಎಂಬಂತಾಗಿದೆ. ಸರ್ಕಾರ ಯಾವಾಗ ಮಖಾಡೆ ಮಲಗುತ್ತದೆ ಎಂಬುದು ಗೊತ್ತಿಲ್ಲ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಯಿಂದ 150 ಸ್ಥಾನ ಗೆಲ್ಲುತ್ತೇವೆ. ಎಚ್.ಡಿ.ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ ಅವರಲ್ಲಿ ಯಾರಾದರೂ ಮುಖ್ಯಮಂತ್ರಿಯಾಗಲಿ. ಎರಡು ಪಕ್ಷದವರು ಒಟ್ಟಿಗೆ ಹೋಗುತ್ತೇವೆ. ನಾವೇ ಅಧಿಕಾರಕ್ಕೆ ಬರುತ್ತೇವೆ, ರೈತರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.
ಜನರ ತೆರಿಗೆ ಹಣವನ್ನು ಗ್ಯಾರಂಟಿ ಹೆಸರಿನಲ್ಲಿ ಸಿಕ್ಕ ಸಿಕ್ಕವರಿಗೆ ನೀಡುತ್ತಿದ್ದಾರೆ. ಕಾಂಗ್ರೆಸ್‌ನವರೇ ಸರ್ಕಾರದ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. 13 ಸಾವಿರ ಕೆಎಸ್‌ಆರ್‌ಟಿಸಿ ಬಸ್ ಕೆಟ್ಟು ನಿಂತಿದ್ದು, ಶಾಲೆಗೆ ಹೋಗುವ ಮಕ್ಕಳಿಗೂ ಬಸ್ ಸೌಲಭ್ಯ ಇಲ್ಲ ವಾಗಿದೆ ಎಂದರು.
ಜೀವನದಲ್ಲಿ ಕತ್ತಲೆ ಹೋಗಿ ಬೆಳಕು ಕೊಡು ಎಂದು ಕಾರ್ತಿಕ ಮಾಸದ ಪ್ರಯುಕ್ತ ವಿಶೇಷವಾಗಿ ದೀಪ ಹಚ್ಚಿ ಕಾರ್ಯಕ್ರಮ ನಡೆಸಲಾಗುತ್ತದೆ. ಪಂಚ ದೇವರುಗಳಿಗೆ ದೀಪೋತ್ಸವ ನೆರವೇರಿಸಲಾಗಿದೆ. ವಿಶೇಷವಾಗಿ ಗಂಗಾರತಿ ಮಾಡಲಾಗಿದೆ. ಮುಂದಿನ ವರ್ಷ ಮಾವತ್ತೂರು ಕೆರೆ ತುಂಬಿ ಕೋಡಿ ಹರಿಯಲಿ ಎಂದು ಆಶಿಸಿದರು.
ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಮುಖಂಡ ಪಿ.ಎನ್.ಕೃಷ್ಣಮೂರ್ತಿ, ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಸಿ.ಲಕ್ಷ್ಮಿಶ್, ವಕ್ತಾರ ಟಿ.ಮಂಜುನಾಥ್ ಮಾತನಾಡಿದರು. ಮುಖಂಡರಾದ ಜೆ.ಎನ್.ನರಸಿಂಹರಾಜು, ರುದ್ರೇಶ್, ನೀಲೇಶ್, ಮಧುಕುಮಾರ್, ರಮೇಶ್, ನವೀನ್‌ಕುಮಾರ್, ಬಿ.ಟಿ.ರಂಗಯ್ಯ, ಜಯಮ್ಮ, ನಾಗರಾಜು, ಕಂಬದ ರಂಗಯ್ಯ, ಕುಮಾರ್, ಹನುಮಂತರಾಯಪ್ಪ ಇತರರು ಭಾಗವಹಿಸಿದ್ದರು.
ನೀರು ಹರಿದರೆ ರಾಜಕೀಯ ನಿವೃತ್ತಿ
ಮುಂದಿನ ಎರಡೂವರೆ ವರ್ಷದಲ್ಲಿ ಎತ್ತಿನಹೊಳೆ ಕಾಮಗಾರಿ ಮುಗಿಯುವುದಿಲ್ಲ. ತಾಲ್ಲೂಕಿನ ಕೆರೆಗಳಿಗೆ ನೀರು ಹರಿಯುವುದಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಪೈಪ್‌ಲೈನ್ ಹಾಕಿ ಭೂಮಿ ಪೂಜೆ ಮಾಡಿ ಹೋಗುತ್ತಿದ್ದಾರೆ. ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದ ಬಳಿ ಹಣವಿಲ್ಲ. ಎರಡೂವರೆ ವರ್ಷದಲ್ಲಿ ತಾಲ್ಲೂಕಿಗೆ ನೀರು ಹರಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಬಿ.ಸುರೇಶ್‌ಗೌಡ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.