ADVERTISEMENT

ರಾಜ್ಯದಲ್ಲಿ ಮದ್ಯ ನಿಷೇಧಕ್ಕೆ ಯಡಿಯೂರಪ್ಪ ಚಿಂತನೆ: ಸಂಸದ ಬಸವರಾಜು ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 12:18 IST
Last Updated 2 ನವೆಂಬರ್ 2019, 12:18 IST
ಜಿ.ಎಸ್‌.ಬಸವರಾಜು
ಜಿ.ಎಸ್‌.ಬಸವರಾಜು   

ತುಮಕೂರು:ಮದ್ಯ ನಿಷೇಧಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿಂತಿಸಿದ್ದಾರೆ ಎಂದು ಬಿಜೆಪಿ ಸಂಸದ ಬಸವರಾಜು ಹೇಳಿದ್ದಾರೆ.

ಈ ನಿಷೇಧದಿಂದ ಸಂಪನ್ಮೂಲ ಕ್ರೋಡೀಕರಣಕ್ಕೆ ಪೆಟ್ಟು ಬೀಳುತ್ತದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸಮತೋಲನ ಮಾಡುವ ವಿಚಾರವೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಜಿಲ್ಲೆಯ ಎಂಟು ಗ್ರಾಮಗಳನ್ನು ಅಭಿವೃದ್ಧಿಗೊಳಿಸುವೆ. ಪಾನ ನಿಷೇಧವನ್ನು ನಾನು ಬೆಂಬಲಿಸುವೆ. ಗುಜರಾತ್ ಮತ್ತು ಬಿಹಾರದಲ್ಲಿ ಪಾನ ನಿಷೇಧ ಆಗಿದೆ. ಇದು ಒಳ್ಳೆಯ ಬೆಳವಣಿಗೆ’ ಎಂದು ಹೇಳಿದರು.

ADVERTISEMENT

ಗುಬ್ಬಿ ತಾಲ್ಲೂಕಿನಲ್ಲಿ ಈ ಹಿಂದೆ ಕೆಲವರು ಮದ್ಯದ ಅಂಗಡಿಗಳನ್ನು ತೆರೆಯಲು ನೀವೇ ಅನುಮತಿ ಕೊಡಿಸಿದ್ದೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಬಸವರಾಜು, ‘ಈ ವಿಚಾರದಲ್ಲಿ ನಾನು ಅಪರಾಧಿ’ ಎಂದು ಮುಗುಳ್ನಕ್ಕರು.

11ರಿಂದ ಬಿಜೆಪಿ ಗಾಂಧಿ ಸಂಕಲ್ಪ ಯಾತ್ರೆ

ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮವರ್ಷಾಚರಣೆ ಅಂಗವಾಗಿ ಅವರ ತತ್ವ, ವಿಚಾರಧಾರೆ ಮತ್ತು ಗಾಂಧಿ ಮಾರ್ಗದ ಬಗ್ಗೆ ಜನರಿಗೆ ತಿಳಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯು ರಾಷ್ಟ್ರವ್ಯಾಪಿ ಹಮ್ಮಿಕೊಂಡಿರುವ ಗಾಂಧೀ ಸಂಕಲ್ಪ ಯಾತ್ರೆಗೆ ಜಿಲ್ಲೆಯಲ್ಲಿ ನ.11ರಂದು ಚಾಲನೆ ದೊರೆಯಲಿದೆ ಎಂದು ಸಂಸದ ಬಸವರಾಜುತಿಳಿಸಿದರು.

‘ಪ್ರತಿ ಸಂಸದರು ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಯಾತ್ರೆ ಹಮ್ಮಿಕೊಂಡಿದ್ದಾರೆ. ನನಗೆ ಆರೋಗ್ಯ ಸರಿ ಇಲ್ಲದ ಕಾರಣ ಜಿಲ್ಲೆಯಲ್ಲಿ ಈಗ ಯಾತ್ರೆ ಹಮ್ಮಿಕೊಳ್ಳಲಾಗುತ್ತಿದೆ. ಜ.30ರ ವರೆಗೆ ಯಾತ್ರೆ ಹಮ್ಮಿಕೊಳ್ಳಲು ಅವಕಾಶ ಇದೆ. ಮಧುಗಿರಿ ವಿಧಾನಸಭಾ ಕ್ಷೇತ್ರದ ಚಿಕ್ಕಮಾಲೂರಿನಲ್ಲಿ ಯಾತ್ರೆಗೆ ಚಾಲನೆ ನೀಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಯಾತ್ರೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ಪಕ್ಷದ ಕಾರ್ಯಕರ್ತರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು, ಶಾಸಕರು, ಮಾಜಿ ಶಾಸಕರು ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ ಬೆಂಬಲಿತರಾಗಿ ಆಯ್ಕೆಯಾದವರು ಯಾತ್ರೆಯಲ್ಲಿ ಪಾಲ್ಗೊಳ್ಳುವರು ಎಂದರು.

ಕೈಮಗ್ಗ ನೇಕಾರರು, ಸಫಾಯಿ ಕರ್ಮಚಾರಿಗಳು, ದಲಿತರ ಕಾಲೊನಿಗಳು, ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ಈ ಸಮಯದಲ್ಲಿ ಭೇಟಿ ನೀಡಲಾಗುವುದು. ಗಾಂಧೀಜಿ ಅವರ ಸ್ವಚ್ಛತಾ ತತ್ವಗಳ ಕುರಿತು ಚಟುವಟಿಕೆಗಳನ್ನು ಕೈಗೊಳ್ಳಲಾಗುವುದು. ಆಯುಷ್ಮಾನ್ ಭಾರತ, ಪಾನಮುಕ್ತ ವಿಷಯಗಳ ಕುರಿತು ಜನರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.

ಸಾರ್ವಜನಿಕರ ಜತೆ ಗಾಂಧೀಜಿ ಅವರ ತತ್ವಗಳು ಮತ್ತು ಸಂಕಲ್ಪ ಯಾತ್ರೆಯ ಬಗ್ಗೆ ಚರ್ಚಿಸಲಾಗುವುದು. ಅವರಿಗೆ ಅರಿವು ಮೂಡಿಸಲಾಗುವುದು. ಒಂದು ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ 70 ಕಿಲೋಮೀಟರ್ ಪಾದಯಾತ್ರೆ ಮಾಡಬೇಕು. ಜನವರಿಯಲ್ಲಿ ಯಾತ್ರೆಯ ಸಮಾರೋಪ ನಡೆಯಲಿದೆ. ಸಮಾರೋಪಕ್ಕೆ ಪಕ್ಷದ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಲಾಗಿದೆ ಎಂದರು.

ಆರ್ ಸಿಇಪಿ ಒಪ್ಪಂದ

ಪ್ರಾದೇಶಿಕ ಆರ್ಥಿಕ ಸಮಗ್ರ ಸಹಭಾಗಿತ್ವ ಒಪ್ಪಂದವನ್ನು ನಾವು ಬೆಂಬಲಿಸುತ್ತೇವೆ. ಕೆಲವು ಕ್ಷೇತ್ರಗಳ ಮೇಲೆ ಪೆಟ್ಟು ಬೀಳಲಿದೆ ನಿಜ. ಆ ಬಗ್ಗೆ ಸಂಸದರು ಪ್ರಧಾನಿ ಅವರ ಜತೆ ಚರ್ಚಿಸುವರು. ಆದರೆ ದೇಶದ ಹಿತದೃಷ್ಟಿಯಿಂದಲೇ ಈ ಒಪ್ಪಂದ ಜಾರಿಯಾಗುತ್ತಿದೆ ಎಂದು ಹೇಳಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಹೆಬ್ಬಾಕ, ಜಿಲ್ಲಾ ಪಂಚಾಯಿತಿ ಸದಸ್ಯ ಹುಚ್ಚಯ್ಯ, ಮುಖಂಡರಾದ ಹುಲಿನಾಯ್ಕರ್, ರೈತ ಮೋರ್ಚಾ ಉಪಾಧ್ಯಕ್ಷ ಶಿವಪ್ರಸಾದ್ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.