ADVERTISEMENT

ಜಾಲತಾಣದಲ್ಲಿ ಕಮೆಂಟ್‌: ಘರ್ಷಣೆ

​ಪ್ರಜಾವಾಣಿ ವಾರ್ತೆ
Published 8 ಮೇ 2021, 4:57 IST
Last Updated 8 ಮೇ 2021, 4:57 IST
ಕುಣಿಗಲ್ ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು
ಕುಣಿಗಲ್ ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು   

ಕುಣಿಗಲ್: ತಾಲ್ಲೂಕಿನ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಪಕ್ಷಗಳ ನಾಯಕರ ಬಗ್ಗೆ ಅಶ್ಲೀಲವಾಗಿ ಬಿಂಬಿಸಿ ಪೋಸ್ಟ್ ಮಾಡುತ್ತಿದ್ದು, ಪೊಲೀಸ್‌ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡೂ ಪಕ್ಷಗಳಿಂದ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಜಾಲತಾಣಗಳಲ್ಲಿ ನಾಯಕರ ಬಗ್ಗೆ ಕೀಳುಮಟ್ಟದ ಭಾಷೆಗಳಲ್ಲಿ ಕಮೆಂಟ್‌ ಮಾಡುತ್ತಿದ್ದು, ಶುಕ್ರವಾರ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆಗೆ ಕಾರಣವಾಗಿದೆ. ಈ ಸಂಬಂಧ ಠಾಣೆಗೆ ದೂರು ನೀಡಿದ್ದು, ಸಾಮಾಜಿಕ ಜಾಲತಾಣ ನಿರ್ವಹಣೆಯ ಎರಡು ಪಕ್ಷದ ಯುವ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎರಡು ಪಕ್ಷದಲ್ಲಿ ಜಾಲತಾಣ ನಿರ್ವಹಣೆಗೆ ಯುವಪಡೆಯನ್ನು ನಿಯೋಜಿಸಲಾಗಿದೆ. ಬಿಜೆಪಿಯವರು ಶಾಸಕ ಡಾ.ರಂಗನಾಥ್ ಮತ್ತು ಸಂಸದ ಡಿ.ಕೆ. ಸುರೇಶ್ ಬಗ್ಗೆ ವೈಯಕ್ತಿಕ ಹಾಗೂ ಅಶ್ಲೀಲವಾದ ವಿಚಾರಗಳ ಬಗ್ಗೆ ಕೀಳಾಗಿ ಕಮೆಂಟ್‌ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನವರು ಬಿಜೆಪಿ ಮುಖಂಡ ಡಿ. ಕೃಷ್ಣಕುಮಾರ್ ಮತ್ತು ಕುಟುಂಬದವರ ಬಗ್ಗೆ ಅಶ್ಲೀಲವಾಗಿ ಜಾಲತಾಣದಲ್ಲಿ ಪೋಸ್ಟ್‌ಮಾಡಿದ್ದರು.

ADVERTISEMENT

ಈ ಬಗ್ಗೆ ಸಾರ್ವಜನಿಕವಾಗಿ ತೀವ್ರ ಚರ್ಚೆಯಾಗಿದ್ದು, ಅಸಮಾಧಾನಗೊಂಡ ಬಿಜೆಪಿ ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದ ಕಾಂಗ್ರೆಸ್ ಜಾಲತಾಣ ನಿರ್ವಹಿಸುತ್ತಿದ್ದ ಎನ್.ಎಸ್. ಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು. ಈ ನಡುವೆ ವಾಗ್ವಾದ ನಡೆಯಿತು. ಸಾರ್ವಜನಿಕರ ಸಮ್ಮುಖದಲ್ಲಿ ತೀವ್ರವಾಗಿ ಥಳಿಸಿ ಕುಣಿಗಲ್ ಪೊಲೀಸರ ವಶಕ್ಕೆ ನೀಡಿದ್ದಾರೆ.

ವಿಚಾರಣೆಗಾಗಿ ಎನ್.ಎಸ್. ಗೌಡ ಅವರನ್ನು ವಶಕ್ಕೆ ಪಡೆದಾಗ ಠಾಣೆ ಮುಂಭಾಗದಲ್ಲಿಯೇ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಅವರ ಆಪ್ತ ಸಹಾಯಕ ಚಂದ್ರು ಮತ್ತು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಬಲರಾಂ, ಸದಸ್ಯ ಕೃಷ್ಣ ಮತ್ತು ಪದಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಮಯದಲ್ಲಿ ಪೊಲೀಸರು ಪ್ರವೇಶಿಸಿ ನಿಯಂತ್ರಿಸಿದರು.

ಶಾಸಕರ ಆಪ್ತ ಸಹಾಯಕ ಚಂದ್ರು ನೀಡಿದ ದೂರಿನ ಮೇರೆಗೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ದಿಲೀಪ್ ಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.