ADVERTISEMENT

ಖಾಸಗಿ ಆಸ್ಪತ್ರೆಗಳು ಹೆಚ್ಚು ಹಣ ಪಡೆದರೆ ದೂರು ನೀಡಿ: ಸಚಿವ ಡಾ.ಕೆ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 7:37 IST
Last Updated 19 ಸೆಪ್ಟೆಂಬರ್ 2020, 7:37 IST
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್
ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್   

ತುಮಕೂರು: ಆಸ್ಪತ್ರೆಗಳಲ್ಲಿ ಕೋವಿಡ್–19 ಚಿಕಿತ್ಸೆಗೆ ಹೆಚ್ಚಿನ ದರ ಪಡೆದರೆ ದೂರು ನೀಡಿ. ಈ ಬಗ್ಗೆ ತನಿಖೆ ನಡೆಸಿ ತಪ್ಪಾಗಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಈಗಾಗಲೇ ದರವನ್ನು ನಿಗದಿ ಮಾಡಿದ್ದೇವೆ. ಇದು ಪಾಲನೆ ಆಗುತ್ತಿಲ್ಲ ಎಂದರೆ ಖಂಡಿತ ಕ್ರಮಕೈಗೊಳ್ಳಲಾಗುವುದು. ಕೋವಿಡ್ ಸಮಸ್ಯೆಯ ಜತೆ ಕೆಲವು ರೋಗಿಗಳಿಗೆ ಬಹು ಅಂಗಾಂಗ ವೈಫಲ್ಯವೂ ಆಗಿರುತ್ತದೆ. ಆಗ ಅದಕ್ಕೆ ಪ್ರತ್ಯೇಕ ಚಿಕಿತ್ಸಾ ವೆಚ್ಚವನ್ನು ಭರಿಸಬೇಕಾಗುತ್ತದೆ’ ಎಂದು ಹೇಳಿದರು.

ಸರ್ಕಾರ ನಿರ್ದೇಶನ ಮತ್ತು ಮಾರ್ಗಸೂಚಿಗಳ ಪ್ರಕಾರವೇ ನಡೆದುಕೊಳ್ಳಬೇಕು. ಕೊರೊನಾದ ಈ ಸಂದರ್ಭದಲ್ಲಿ ಎಲ್ಲರೂ ಮಾನವೀಯವಾಗಿ ನಡೆದುಕೊಳ್ಳಬೇಕು ಎಂದರು.

ADVERTISEMENT

ರಾಜ್ಯದಲ್ಲಿ ಐದು ಲಕ್ಷ ಮಂದಿಗೆ ಸೋಂಕು ತಗುಲಿದೆ. ಇವರಲ್ಲಿ ನಾಲ್ಕು ಲಕ್ಷ ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟಾರೆ ಸಾವಿನ ಪ್ರಮಾಣ ಶೇ 1.64 ಇದ್ದರೆ, ರಾಜ್ಯದಲ್ಲಿ ಶೇ 1.56 ಇದೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ವಿರೋಧ ಪಕ್ಷದವರು ಸಾವಿನ ಪ್ರಮಾಣ ರಾಜ್ಯದಲ್ಲಿ ಹೆಚ್ಚುತ್ತಿದೆ ಎಂದು ಸುಮ್ಮನೆ ಸರ್ಕಾರವನ್ನು ಟೀಕಿಸುತ್ತಿದ್ದಾರೆ. ಹೇಳಿಕೆ ಕೊಡುವ ಮುನ್ನ ಅಂಕಿ ಅಂಶಗಳನ್ನು ನೋಡಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.