ADVERTISEMENT

ಕಾಂಗ್ರೆಸ್‌ನಲ್ಲಿ ಗೊಂದಲ: ಅಧ್ಯಕ್ಷರ ಅಸಹಾಯಕತೆ

ಮಹಾತ್ಮ ಗಾಂಧೀಜಿ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 15:34 IST
Last Updated 30 ಜನವರಿ 2023, 15:34 IST
ತುಮಕೂರು ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಹುತಾತ್ಮರ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮುಖಂಡರಾದ ಚಂದ್ರಶೇಖರಗೌಡ, ಕೆಂಚಮಾರಯ್ಯ, ಆರ್.ರಾಮಕೃಷ್ಣ ಇತರರು ಇದ್ದರು
ತುಮಕೂರು ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಹುತಾತ್ಮರ ದಿನಾಚರಣೆ ಅಂಗವಾಗಿ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಮುಖಂಡರಾದ ಚಂದ್ರಶೇಖರಗೌಡ, ಕೆಂಚಮಾರಯ್ಯ, ಆರ್.ರಾಮಕೃಷ್ಣ ಇತರರು ಇದ್ದರು   

ತುಮಕೂರು: ಕಾಂಗ್ರೆಸ್‌ ನಾಯಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಬಲಿ ಕೊಟ್ಟಿದ್ದಾರೆ. ಆದರೆ ಜಿಲ್ಲೆಯಲ್ಲಿ ಕೆಲವು ನಾಯಕರು, ಕಾರ್ಯಕರ್ತರು ಗೊಂದಲ ಸೃಷ್ಟಿಸುತ್ತಿರುವುದು ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರಗೌಡ ಆತಂಕ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಮಹಾತ್ಮ ಗಾಂಧೀಜಿ ಸ್ಮರಣೆ ಅಂಗವಾಗಿ ಹುತಾತ್ಮರ ದಿನಾಚರಣೆಯನ್ನು ಪಕ್ಷದ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಗಾಂಧೀಜಿ, ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ, ರಾಜೀವ್‍ ಗಾಂಧಿ ಅವರನ್ನೂ ನೆನಪು ಮಾಡಿಕೊಳ್ಳಲಾಯಿತು. ಅವರ ಭಾವಚಿತ್ರಕ್ಕೆ ಮುಖಂಡರು ಪುಷ್ಪ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೇ ಪಡೆಯದ ಕೆಲವರು ನಾನೇ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಅಂತಹವರ ಜತೆಗೆ ಪಕ್ಷದ ಕೆಲವು ಮುಖಂಡರು ಕೈಜೋಡಿಸಿರುವುದು ವಿಷಾದದ ಸಂಗತಿ. ಪಕ್ಷದ ನಾಯಕರ ಪ್ರಾಣತ್ಯಾಗ ವ್ಯರ್ಥವಾಗಬಾರದು ಎಂಬ ಆಶಯ ಕಾರ್ಯಕರ್ತರಲ್ಲಿ ಇದ್ದರೆ ಮೊದಲು ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಬೇಕು. ಇಲ್ಲವಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

ಮುಖಂಡ ಕೆಂಚಮಾರಯ್ಯ, ‘ಅಹಿಂಸೆ ಪ್ರತಿಪಾದಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿಯನ್ನು ಹತ್ಯೆ ಮಾಡಲಾಯಿತು. ಮೂರು ದಶಕಗಳಿಗೂ ಹೆಚ್ಚು ಕಾಲ ಗಾಂಧೀಜಿ ಹೋರಾಟವನ್ನು ಬ್ರಿಟಿಷರು ಸಹಿಸಿಕೊಂಡರು. ಸ್ವಾತಂತ್ರ್ಯ ಬಂದ ಒಂದು ವರ್ಷ ಕಾಲ ಭಾರತೀಯರು ಸಹಿಸಿಕೊಳ್ಳಲಿಲ್ಲ. ಗಾಂಧೀಜಿ ಹತ್ಯೆಗೆ ಪಿತೂರಿ ನಡೆಸಿದ ವೀರ ಸಾರ್ವಕರ್ ಈಗ ಬಿಜೆಪಿ ಪರಮ ಶ್ರೇಷ್ಠ ನಾಯಕರಾಗಿದ್ದಾರೆ’ ಎಂದು ಟೀಕಿಸಿದರು.

ರಾಷ್ಟ್ರಕ್ಕಾಗಿ ದುಡಿದ ಇಂದಿರಾ ಗಾಂಧಿ, ರಾಜೀವ್‍ ಗಾಂಧಿ ಸಹ ಗುಂಡಿಗೆ ಬಲಿಯಾದರು. ಸಾವಿನ ಹಿಂದಿನ ತ್ಯಾಗ, ಬಲಿದಾನವನ್ನು ಕಾಂಗ್ರೆಸ್ ಕಾರ್ಯಕರ್ತರು ಅರ್ಥ ಮಾಡಿಕೊಂಡು, ಅವರ ಸಾವು ವ್ಯರ್ಥವಾಗದಂತೆ ನಡೆದುಕೊಳ್ಳಬೇಕಿದೆ ಎಂದು ಸಲಹೆ ಮಾಡಿದರು.

ಮತ್ತೊಬ್ಬ ಮುಖಂಡ ಎಸ್. ಷಪಿ ಅಹ್ಮದ್‌, ‘ದೇಶದ ಏಕತೆ, ಸಮಗ್ರತೆಗಾಗಿ ಪಕ್ಷದ ಮುಖಂಡ ರಾಹುಲ್‌ ಗಾಂಧಿ ಸುಮಾರು 4 ಸಾವಿರ ಕಿ.ಮೀಗಳಿಗೂ ಹೆಚ್ಚು ಪಾದಯಾತ್ರೆ ನಡೆಸಿ ಕಾಶ್ಮೀರದ ಶ್ರೀನಗರ ತಲುಪಿ ಲಾಲ್ ಚೌಕದಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಲು ಮುಂದಾದಾಗ ಹಲವರು ವಿರೋಧಿಸಿದ್ದರು. ದೇಶದಲ್ಲಿ ಇಂತಹ ದ್ವೇಷ ಅಳಿಯಬೇಕು’ ಎಂದು ಹೇಳಿದರು.

ಮುಖಂಡರಾದ ಸಿದ್ದಲಿಂಗೇಗೌಡ, ಆರ್. ರಾಮಕೃಷ್ಣ, ಮುರುಳೀಧರ್ ಹಾಲಪ್ಪ, ರೇವಣ್ಣಸಿದ್ದಯ್ಯ, ಶಿವಾಜಿ, ಪ್ರಸನ್ನಕುಮಾರ್, ಮರಿಚನ್ನಮ್ಮ, ಡಾ.ಫಹ್ಹಾನ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.