ADVERTISEMENT

ಆರೋಪ ಸಾಬೀತುಪಡಿಸಿ: ಸವಾಲು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2024, 4:38 IST
Last Updated 23 ಅಕ್ಟೋಬರ್ 2024, 4:38 IST
ಗುಬ್ಬಿಯಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆ
ಗುಬ್ಬಿಯಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆ   

ಗುಬ್ಬಿ: ‘ಶಾಸಕ ಎಸ್‌.ಆರ್. ಶ್ರೀನಿವಾಸ್ ವಿರುದ್ಧ ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಮುಖಂಡ ಎಚ್‌.ಡಿ. ದಿಲೀಪ್‌ ಕುಮಾರ್‌ ಅಸ್ತಿತ್ವ ಉಳಿಸಿಕೊಳ್ಳಲು ಶಾಸಕರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ’ ಎಂದು ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಆರ್. ವೆಂಕಟೇಶ್ ಕಿಡಿಕಾರಿದರು.

ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರಗೊಂದಿಗೆ ಮಾತನಾಡಿದ ಅವರು, ‘ಕನಿಷ್ಠ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಅರ್ಹತೆ ಇಲ್ಲದವರು ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಮಾತನಾಡುತ್ತಿರುವುದು ವಿಪರ್ಯಾಸ. ‘ಕಮಿಷನ್ ಪಡೆದಿದ್ದಾರೆ’ ಎಂದು ಶಾಸಕರ ಮೇಲೆ ಮಾಡಿರುವ ಆರೋಪವನ್ನು ರುಜುವಾತು ಪಡಿಸಲು ನಾವೇ ಸಾರ್ವಜನಿಕ ವೇದಿಕೆ ಸಿದ್ಧಪಡಿಸುತ್ತೇವೆ. ಸಾಕ್ಷಿ ಸಮೇತ ಬಂದು ಸಾಬೀತುಪಡಿಸಲಿ’ ಎಂದು ಸವಾಲು ಹಾಕಿದರು.

ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ವೆಂಕಟರಮಣಪ್ಪ ಮಾತನಾಡಿ, ಕಾಂಗ್ರೆಸ್ ಜನಪರ ಯೋಜನೆಗಳನ್ನು ಹೆಚ್ಚು ಜನಪ್ರಿಯಗೊಳಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಸ್ವಾಭಿಮಾನಿ ಸಮಾವೇಶ ಹಮ್ಮಿಕೊಳ್ಳಲಾಗುವುದು. ಆ ಮೂಲಕ ಮತದಾರರಲ್ಲಿ ಅರಿವು ಮೂಡಿಸಿ ಮುಂಬರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಗೆಲುವು ಸಾಧಿಸುವತ್ತ ಪಕ್ಷ ಕ್ರಿಯಾಯೋಜನೆ ರೂಪಿಸಿದೆ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್ ಗೌಡ ಮಾತನಾಡಿ, ಜಿಲ್ಲೆಯ ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಜಿಲ್ಲೆಯ ಜನರ ಪರವಾಗಿ ಸದಾ ನಿಲ್ಲುವರು.
ಹೇಮಾವತಿ ಲಿಂಕ್ ಕೆನಾಲ್‌ ವಿಚಾರದಲ್ಲಿ ವರಿಷ್ಠರು ತಜ್ಞರ ಸಮಿತಿಯಂತೆ ತೀರ್ಮಾನ ತೆಗೆದುಕೊಳ್ಳುವರು ಎಂದು ಹೇಳಿದರು.

ಕಾಂಗ್ರೆಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಪ.ಪಂ. ಅಧ್ಯಕ್ಷೆ ಮಂಗಳಮ್ಮ, ಮುಖಂಡರಾದ ಕೆ.ಆರ್. ತಾತಯ್ಯ, ಗುರುರೇಣುಕಾರಾಧ್ಯ, ಶಂಕರಾನಂದ, ಸೌಭಾಗ್ಯಮ್ಮ, ಕೊಡಿಯಾಲ ಮಹಾದೇವ, ಕಡಬ ಶಂಕರ್, ಚೇಳೂರು ಶಿವನಂಜಪ್ಪ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.