ADVERTISEMENT

ಜನರ ಪ್ರಾಣ ರಕ್ಷಣೆಗೆ ಕಾಂಗ್ರೆಸ್ ಹೋರಾಟ: ಜಿ. ಪರಮೇಶ್ವರ

ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಘೋಷಣೆ l ಡಿಕೆಎಸ್‌ ಟ್ರಸ್ಟ್‌ನಿಂದ ಜನರಿಗೆ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 4:34 IST
Last Updated 29 ಜೂನ್ 2021, 4:34 IST
ಕುಣಿಗಲ್ ಪಟ್ಟಣದಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್‌ನಿಂದ ಸಂಸದ ಡಿ.ಕೆ. ಸುರೇಶ್ ಮತ್ತು ಶಾಸಕ ಡಾ.ಜಿ. ಪರಮೇಶ್ವರ ಜನರಿಗೆ ದಿನಸಿ ಕಿಟ್ ವಿತರಿಸಿದರು. ಡಾ.ರಂಗನಾಥ್, ಸಲೀಂ ಮಹಮ್ಮದ್ ಹಾಜರಿದ್ದರು
ಕುಣಿಗಲ್ ಪಟ್ಟಣದಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್‌ನಿಂದ ಸಂಸದ ಡಿ.ಕೆ. ಸುರೇಶ್ ಮತ್ತು ಶಾಸಕ ಡಾ.ಜಿ. ಪರಮೇಶ್ವರ ಜನರಿಗೆ ದಿನಸಿ ಕಿಟ್ ವಿತರಿಸಿದರು. ಡಾ.ರಂಗನಾಥ್, ಸಲೀಂ ಮಹಮ್ಮದ್ ಹಾಜರಿದ್ದರು   

ಕುಣಿಗಲ್: ‘ರಾಜ್ಯದ ಜನತೆ ಕೊರೊನಾ ಎರಡನೇ ಅಲೆಯಿಂದ ಸಂಕಷ್ಟಕ್ಕೀಡಾಗಿದ್ದಾರೆ. ಮೊದಲು ಅವರ ಪ್ರಾಣ ರಕ್ಷಣೆಗಾಗಿ ಹೋರಾಟ ಮಾಡುತ್ತೇವೆ. ಆ ನಂತರ ರಾಜಕೀಯದ ಬಗ್ಗೆ ಚರ್ಚಿಸುತ್ತೇವೆ’ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ತಿಳಿಸಿದರು.

ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ಡಿಕೆಎಸ್ ಚಾರಿಟಬಲ್ ಟ್ರಸ್ಟ್‌ನಿಂದ ಸೋಮವಾರ ನಡೆದ ಬಡವರಿಗೆ ದಿನಸಿ ಕಿಟ್ ಮತ್ತು ಉಚಿತ ಲಸಿಕೆ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಉದ್ದವಾಗಿ ಗಡ್ಡ ಬಿಡಲಿ, ಉದ್ದವಾದ ಭಾಷಣ ಮಾಡಲಿ, ಅದರ ಬಗ್ಗೆ ನಾವು ಮಾತನಾಡುವುದಿಲ್ಲ. ಎರಡನೇ ಅಲೆ ತೀವ್ರವಾಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದರೂ ಗಮನಹರಿಸಲಿಲ್ಲ. ದೇಶದಲ್ಲಿ ಜನ ಸಾಯುತ್ತಿದ್ದಾಗ ಅಗತ್ಯ ಲಸಿಕೆ ವಿತರಣೆಗೆ ಕ್ರಮಕೈಗೊಳ್ಳದೆ 6.5 ಕೋಟಿ ಡೋಸ್‌ಗಳನ್ನು ವಿದೇಶಕ್ಕೆ ನೀಡಿದ್ದು ಖಂಡನೀಯ ಎಂದರು.

ADVERTISEMENT

ರಾಜ್ಯದಲ್ಲಿ ಬಿಜೆಪಿ ಜನರು ಸಂಕಷ್ಟ ಸ್ಥಿತಿಯಲ್ಲಿರುವಾಗ ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿ ನಿಭಾಯಿಸಲು ಮುಂದಾಗಲಿಲ್ಲ. ಆಂತರಿಕವಾಗಿ ಅಧಿಕಾರಕ್ಕಾಗಿ ಕಿತ್ತಾಡುತ್ತಿರುವ ಮಂತ್ರಿಗಳ ಕೈಗೆ ಅಧಿಕಾರ ನೀಡಿ ಮತ್ತಷ್ಟೂ ಅವಘಡಗಳಿಗೆ ಯಡಿಯೂರಪ್ಪ ಕಾರಣಕರ್ತರಾಗಿದ್ದಾರೆ ಎಂದು ಟೀಕಿಸಿದರು.

ಸಂಸದ ಡಿ.ಕೆ. ಸುರೇಶ್ ಮಾತನಾಡಿ, ರಾಜ್ಯ ಸರ್ಕಾರ ಜನರ ಜೀವ ಮತ್ತು ಜೀವನ ಉಳಿಸಲಾಗದ ಸ್ಥಿತಿಯಲ್ಲಿದೆ. ಜನತೆಯ ಸಂಕಷ್ಟಗಳಿಗೆ ಬಿಜೆಪಿ ಸರ್ಕಾರ ಸ್ಪಂದಿಸುತ್ತಿಲ್ಲ. ಇದರಿಂದ ಜನರು ಸಾವು, ನೋವುಗಳಿಂದ ಬಳಲಿದ್ದಾರೆ. ಸರ್ಕಾರದ ಆಡಳಿತ ವೈಫಲ್ಯದಿಂದಾಗಿ ಜನ ಸತ್ತಿದ್ದಾರೆ ಎಂದು ಆರೋಪಿಸಿದರು.

ಸರ್ಕಾರ ಘೋಷಿಸಿದ ಪ್ಯಾಕೇಜ್ ಹಣ ಬಡವರ ಮತ್ತು ಕೆಲಸವಿಲ್ಲದೆ ಕೈಕಟ್ಟಿ ಕುಳಿತಿರುವವರ ಖಾತೆಗೆ ಸೇರಿಲ್ಲ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಸಲಹೆ ಮೇರೆಗೆ ಸಂಕಷ್ಟಕ್ಕೆ ಸಿಲುಕಿದ ಮತದಾರರ ಮನೆಗಳಿಗೆ ಭೇಟಿ ನೀಡಿ ಧನಸಹಾಯ ಮತ್ತು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಡಾ.ರಂಗನಾಥ, ತಾಲ್ಲೂಕಿನಲ್ಲಿ 75 ಸಾವಿರ ಕುಟುಂಬಗಳಿಗೆ ₹ 3 ಕೋಟಿ ವೆಚ್ಚದಲ್ಲಿ ದಿನಸಿ ಕಿಟ್ ವಿತರಿಸಲಾಗುತ್ತಿದೆ. 500 ಮಂದಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ ಎಂದರು.

ಶಾಸಕ ರಂಗನಾಥ್ ಅವರ ಕಾರ್ಯವೈಖರಿಯನ್ನು ಪ್ರಶಂಸಿದ ಸಂಸದರು, 1,500 ಡೋಸ್ ಲಸಿಕೆ ನೀಡುವುದಾಗಿ ತಿಳಿಸಿದರು. ಪರಮೇಶ್ವರ ಅವರು ಸಿದ್ಧಾರ್ಥ ಮೆಡಿಕಲ್ ಕಾಲೇಜು ವತಿಯಿಂದ ತಾಲ್ಲೂಕಿಗೆ ವೈದ್ಯ ತಂಡ ಕಳುಹಿಸಿ ಪ್ರತಿಯೊಂದು ಮನೆಗೂ ತೆರಳಿ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ಸಹಕಾರ ನೀಡುವ ಭರವಸೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಮಹಮ್ಮದ್, ಪುರಸಭೆ ಅಧ್ಯಕ್ಷ ನಾಗೇಂದ್ರ, ಉಪಾಧ್ಯಕ್ಷೆ ಮಂಜುಳಾ, ಮುಖಂಡ ಆಡಿಟರ್ ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ವೆಂಕಟರಾಮ್
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.