ADVERTISEMENT

ತಿಪಟೂರು: ರೈತರ ಧರಣಿಗೆ ಕಾಂಗ್ರೆಸ್ ಮುಖಂಡರ ಬೆಂಬಲ

ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2023, 4:58 IST
Last Updated 3 ಮಾರ್ಚ್ 2023, 4:58 IST
ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾಜಿ ಶಾಸಕ ಕೆ. ಷಡಕ್ಷರಿ ಪಾಲ್ಗೊಂಡು ಬೆಂಬಲ ಘೋಷಿಸಿದರು
ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿಯಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಮಾಜಿ ಶಾಸಕ ಕೆ. ಷಡಕ್ಷರಿ ಪಾಲ್ಗೊಂಡು ಬೆಂಬಲ ಘೋಷಿಸಿದರು   

ತಿಪಟೂರು: ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿಯಿಂದ ನಗರದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯು ಗುರುವಾರ 11ನೇ ದಿನಕ್ಕೆ ಕಾಲಿಟ್ಟಿದ್ದು, ತಾಲ್ಲೂಕು ಕಾಂಗ್ರೆಸ್ ಘಟಕ ಹಾಗೂ ಮಾಜಿ ಶಾಸಕ ಕೆ. ಷಡಕ್ಷರಿ ಹೋರಾಟಕ್ಕೆ ಬೆಂಬಲ ಘೋಷಿಸಿದರು.

ನಗರದ ಉಪ ವಿಭಾಗಾಧಿಕಾರಿ ಕಚೇರಿ ಮುಂಭಾಗ ನಡೆಯುತ್ತಿರುವ ಧರಣಿಯಲ್ಲಿ ಪಾಲ್ಗೊಂಡ ಮಾಜಿ ಶಾಸಕ ಕೆ. ಷಡಕ್ಷರಿ ಮಾತನಾಡಿ, ‘ಪ್ರತಿಭಟನೆಯ ಪ್ರಾರಂಭದಿಂದಲೂ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಬಜೆಟ್‍ನಲ್ಲಿಯೂ ಯಾವುದೇ ಪ್ರೋತ್ಸಾಹ ಧನ ನೀಡದ ಕಾರಣ ಬೆಂಬಲ ವ್ಯಕ್ತಪಡಿಸುತ್ತಿದ್ದೇನೆ’ ಎಂದರು.

ಒಂದು ಕ್ವಿಂಟಲ್ ಕೊಬ್ಬರಿ ಬೆಲೆ ₹ 9 ಸಾವಿರಕ್ಕೆ ತಲುಪಿದರೂ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹಾಕದೆ ತಾನೂ ಪ್ರೋತ್ಸಾಹಧನ ಘೋಷಿಸದೆ ಕಾಲಹರಣ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇದ್ದಾಗ ಕ್ವಿಂಟಲ್ ಕೊಬ್ಬರಿಗೆ ₹ 2 ಸಾವಿರ ಪ್ರೋತ್ಸಾಹಧನ ನೀಡಲಾಗಿತ್ತು ಎಂದರು.

ADVERTISEMENT

ಎಪಿಎಂಸಿಯಲ್ಲಿನ ವರ್ತಕರು ತಾವೇ ಬೆಲೆ ನಿಗದಿ ಮಾಡಿಕೊಂಡು ಅದಕ್ಕಿಂತ ಕಡಿಮೆಗೆ ಬಂದರೆ ಮಾರಾಟ ಮಾಡದಿದ್ದರೆ ಬೆಲೆ ಏರಿಕೆ ಆಗುತ್ತದೆ. ಅಲ್ಲದೇ ನಂ. 2 ಕೊಬ್ಬರಿ ರವಾನೆಗೆ ಅಧಿಕಾರಿಗಳು ಶಾಮೀಲಾಗದೆ ತಡೆಹಾಕುವ ಕೆಲಸ ಮಾಡಬೇಕಿದೆ. ನಾನು ರೈತನ ಮಗನಾಗಿದ್ದು ರೈತರಿಗೆ ಸಂಪೂರ್ಣ ಬೆಂಬಲವಿದೆ. ತಾಲ್ಲೂಕಿನ ಶಾಸಕರು, ಸಚಿವರು ಕೊಬ್ಬರಿ ಬೆಲೆ ಬಗ್ಗೆ ಸದನದಲ್ಲಿ ಅಥವಾ ಸರ್ಕಾರದ ಬಳಿ ಮಾತನಾಡದಿರುವುದು ನಿಜಕ್ಕೂ ದುರಂತ ಎಂದು ಟೀಕಿಸಿದರು.

ತಾಲ್ಲೂಕು ಕಾಂಗ್ರೆಸ್ ಘಟಕದ ಅಧ್ಯಕ್ಷ ಕಾಂತರಾಜು, ನಗರ ಘಟಕದ ಅಧ್ಯಕ್ಷ ಟಿ.ಎನ್. ಪ್ರಕಾಶ್, ತಾ.ಪಂ. ಮಾಜಿ ಅಧ್ಯಕ್ಷ ಎನ್.ಎಂ. ಸುರೇಶ್, ಸ್ಥಾಯಿ ಸಮಿತಿ ಮಾಜಿ ಸದಸ್ಯ ಎಚ್.ಜಿ. ಸುಧಾಕರ್, ಸಿದ್ದಾಪುರ ಸುರೇಶ್, ನಿಖಿಲ್ ರಾಜಣ್ಣ, ಆದಿತ್ಯ ಜಯಣ್ಣ, ಬಳುವನೆರಲು ಸಿದ್ಧಯ್ಯ, ಹೊಗವನಘಟ್ಟ ಯೋಗಣ್ಣ, ಸಂಘದ ಅಧ್ಯಕ್ಷ ಬಿ. ಯೋಗೀಶ್ವರಸ್ವಾಮಿ, ಬಿ.ಬಿ. ಸಿದ್ಧಲಿಂಗಮೂರ್ತಿ, ಮನೋಹರ್ ಪಟೇಲ್, ಶ್ರೀಹರ್ಷ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.