ADVERTISEMENT

ದೂರವಾಣಿ ಕದ್ದಾಲಿಕೆ: ತನಿಖೆಗೆ ಕಾಂಗ್ರೆಸ್ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಜುಲೈ 2021, 16:18 IST
Last Updated 21 ಜುಲೈ 2021, 16:18 IST
   

ತುಮಕೂರು: ರಾಜ್ಯದಲ್ಲಿ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಸರ್ಕಾರ ಉರುಳಿಸಲು ಪೆಗಾಸಸ್ ಗೂಢಚರ್ಯೆಯ ಕುತಂತ್ರಾಂಶ ಬಳಕೆ ಮಾಡಿಕೊಂಡು ದೂರವಾಣಿ ಕದ್ದಾಲಿಕೆ ಮಾಡಿರುವ ಬಗ್ಗೆ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡರು ಬುಧವಾರ ಆಗ್ರಹಿಸಿದರು.

ದೂರವಾಣಿ ಕದ್ದಾಲಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಕಳಂಕ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ಡಾ.ಜಿ.ಪರಮೇಶ್ವರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ, ಮುಖಂಡ ಟಿ.ಬಿ.ಜಯಚಂದ್ರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಇದೊಂದು ಹೀನ ಕೃತ್ಯ. ಪ್ರಜಾಪ್ರಭುತ್ವದ ಕಗ್ಗೊಲೆ. ತಲೆ ತಗ್ಗಿಸುವ ವಿಚಾರ. ಪ್ರಧಾನಿ ನರೇಂದ್ರ ಮೋದಿ ಅವರ ಮನ್‌ಕಿಬಾತ್ ಜನರನ್ನು ಮೂರ್ಖರನ್ನಾಗಿ ಮಾಡಿದೆ. ಗುರುವಾರ ಬೆಂಗಳೂರಿನಲ್ಲಿ ರಾಜಭವನ ಚಲೋ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ADVERTISEMENT

ದೇಶ, ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ಮಾಡಲು ಪೆಗಾಸಸ್ ಸಂಸ್ಥೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆಯೆ? ಇಲ್ಲ ಅವರೇ ವಿದೇಶದಿಂದ ಬಂದು ನೇರವಾಗಿ ಕದ್ದಾಲಿಕೆ ಮಾಡಿದ್ದಾರೆಯೆ? ಎಂಬ ಸತ್ಯವನ್ನು ಕೇಂದ್ರ ಸರ್ಕಾರ ಜನರ ಮುಂದಿಡಬೇಕು. ನೇರವಾಗಿ ಯಾವ ಸಂಸ್ಥೆಯೂ ಕದ್ದಾಲಿಕೆ ಮಾಡಲು ಸಾಧ್ಯವಿಲ್ಲ. ಕೇಂದ್ರದ ಅನುಮತಿ ಪಡೆದುಕೊಂಡೇ ಈ ಕೆಲಸ ಮಾಡಿರುತ್ತದೆ. ಸಾರ್ವಜನಿಕರ ಮುಂದೆ ಸತ್ಯ ಒಪ್ಪಿಕೊಳ್ಳಬೇಕು ಎಂದು ಪರಮೇಶ್ವರ ಆಗ್ರಹಿಸಿದರು.

ರಾಜ್ಯದಲ್ಲಿದ್ದ ಸಮ್ಮಿಶ್ರ ಸರ್ಕಾರ ಬೀಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕೆಲಸ ಮಾಡಿದೆ. ಇದೇ ರೀತಿ ಬೇರೆ ಬೇರೆ ರಾಜ್ಯಗಳಲ್ಲಿ ದೂರವಾಣಿ ಕದ್ದಾಲಿಕೆ ಮಾಡಿ ಅಲ್ಲಿನ ಸರ್ಕಾರಗಳನ್ನು ಉರುಳಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ದೇಶಕ್ಕೆ ಭದ್ರತೆ ಇಲ್ಲವಾಗಿದೆ. ಸರ್ಕಾರದಿಂದಲೇ ಖಾಸಗೀತನಕ್ಕೆ ಧಕ್ಕೆ ಬಂದಿದೆ ಎಂದು ಆರೋಪಿಸಿದರು.

ಹೆಚ್ಚಿದ ಭಿಕ್ಷುಕರು: ಕಳೆದ ಕೆಲ ವರ್ಷಗಳಿಂದ ಮನೆಗಳ ಬಳಿಗೆ ಬರುತ್ತಿದ್ದ ಭಿಕ್ಷುಕರ ಸಂಖ್ಯೆ ಕಡಿಮೆಯಾಗಿತ್ತು. ರಾಜ್ಯ ಸರ್ಕಾರ ಬಡವರಿಗೆ ನೀಡುತ್ತಿದ್ದ ಅಕ್ಕಿ ಪ್ರಮಾಣವನ್ನು 2 ಕೆ.ಜಿ.ಗೆ ಇಳಿಸಿದ ನಂತರ ಬಡತನ ಹೆಚ್ಚಾಗಿದೆ. ಬಡವರು ಉಪವಾಸದಿಂದ ನರಳುತ್ತಿದ್ದರೆ, ಕಡುಬಡವರು ಭಿಕ್ಷೆ ಬೇಡುವಂತಾಗಿದೆ. ರಾಜ್ಯ ಸರ್ಕಾರ ಜನರನ್ನು ಭಿಕ್ಷುಕರನ್ನಾಗಿ ಮಾಡಿದೆ ಎಂದು ಕೆ.ಎನ್.ರಾಜಣ್ಣ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.