ADVERTISEMENT

ಕೊಡಿಗೇನಹಳ್ಳಿ: ದ್ವಿಪಥ, ಬೈಪಾಸ್‌ ನಿರ್ಮಾಣ; ಒತ್ತುವರಿ ತೆರವಿಗೆ ಸ್ಥಳೀಯರ ಒತ್ತಾಯ

ಗಂಗಾಧರ್ ವಿ ರೆಡ್ಡಿಹಳ್ಳಿ
Published 1 ಜನವರಿ 2024, 7:33 IST
Last Updated 1 ಜನವರಿ 2024, 7:33 IST
ಕೊಡಿಗೇನಹಳ್ಳಿ ಮುಖ್ಯರಸ್ತೆ ಬದಿ ವಾಹನ ನಿಲ್ಲಿಸಿರುವುದು
ಕೊಡಿಗೇನಹಳ್ಳಿ ಮುಖ್ಯರಸ್ತೆ ಬದಿ ವಾಹನ ನಿಲ್ಲಿಸಿರುವುದು   

ಕೊಡಿಗೇನಹಳ್ಳಿ: ಮಧುಗಿರಿ ತಾಲ್ಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ಕೊಡಿಗೇನಹಳ್ಳಿ ವೇಗವಾಗಿ ಬೆಳೆಯುತ್ತಿದೆ. ಆದರೆ ಇಲ್ಲಿ ವೇಗಕ್ಕೆ ತಕ್ಕಂತೆ ರಸ್ತೆ ವಿಸ್ತರಣೆ, ಬೈಪಾಸ್, ದ್ವಿಪಥ ರಸ್ತೆ ಇಲ್ಲದೆ ಜನರು ನಿತ್ಯ ಸಮಸ್ಯೆ ಎದುರಿಸುವಂತಾಗಿದೆ.

ಕೊಡಿಗೇನಹಳ್ಳಿ, ಐಡಿಹಳ್ಳಿ ಹಾಗೂ ಪುರವರ ಹೋಬಳಿಯ ಹಲವು ಗ್ರಾಮಗಳಲ್ಲಿನ ಜನರು ಕೆಲಸ, ವ್ಯಾಪಾರ, ಬ್ಯಾಂಕಿಂಗ್ ವಹಿವಾಟಿಗೆ ಹಾಗೂ ಗೌರಿಬಿದನೂರು, ದೊಡ್ಡಬಳ್ಳಾಪುರ, ಆಂಧ್ರಪ್ರದೇಶದ ಚೆಕ್‌ಪೋಸ್ಟ್ ಹಾಗೂ ಮಧುಗಿರಿ-ತುಮಕೂರು ಕಡೆ ಹೋಗಬೇಕಾದ ಗಾರ್ಮೆಂಟ್ಸ್ ಕಾರ್ಮಿಕರ ಜೊತೆಗೆ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಹೋಗಬೇಕು.

ಕೊಲ್ಲಾಪುರದಮ್ಮ-ಶ್ರೀರಾಮ ದೇವಸ್ಥಾನದ ಕಿರಿದಾದ ರಸ್ತೆ ಮಾರ್ಗದಲ್ಲಿ ಜಯಮಂಗಲಿ ಕೃಷ್ಣಮೃಗ ವನ್ಯಧಾಮ, ರೆಡ್ಡಿಹಳ್ಳಿ, ಕಾಳೇನಹಳ್ಳಿ, ಮೈದನಹೊಸಹಳ್ಳಿ, ವೀರನಾಗೇನಹಳ್ಳಿ, ವೀರಾಪುರ, ಕೋಡ್ಲಾಪುರ, ಗುಟ್ಟೆ, ಮತ್ಯಾಲಮ್ಮನಹಳ್ಳಿ, ಮೌಲಾನಸಾಬ್ ಪಾಳ್ಯ, ತೆರಿಯೂರು, ಕುರುಕೇನಹಳ್ಳಿ, ಸಿಂಗನಹಳ್ಳಿ, ಮಸರಪಡಿ, ಪೋಲೇನಹಳ್ಳಿ, ಚಿಕ್ಕದಾಳವಟ್ಟ, ದೊಡ್ಡದಾಳವಟ್ಟ, ಶಾನಗಾನಹಳ್ಳಿ, ಐಡಿಹಳ್ಳಿ, ದೇವರತೋಪು, ಮೈದನಹಳ್ಳಿ, ಅಡವಿನಾಗೇನಹಳ್ಳಿ, ಮುತ್ತರಾಯನಹಳ್ಳಿ, ಸುದ್ದೇಕುಂಟೆ, ತಿಪ್ಪಾಪುರ ಗ್ರಾಮಗಳ ಕಡೆಯಿಂದ ಬರುವ ವಾಹನಗಳೆಲ್ಲ ಈ ಇಕ್ಕಿಟ್ಟಿನ ರಸ್ತೆಯಲ್ಲಿ ಹೋಗಿ ಬರುವುದರಿಂದ ಎದುರುಗಡೆಯಿಂದ ಬಸ್, ಲಾರಿ ಅಥವಾ ಕಾರು ಬಂದಾಗ ಇತರೆ ವಾಹನಗಳು ಹಿಂದೆ ಅಥವಾ ಮುಂದಕ್ಕೆ ಚಲಿಸಲಾಗದೆ ಹರಸಾಹಸಪಡಬೇಕಾದ ಅನಿವಾರ್ಯವಿದೆ.

ADVERTISEMENT

ಕೊಡಿಗೇನಹಳ್ಳಿಯಲ್ಲಿರುವ ಹಲವು ಇಲಾಖೆ, ಅಂಗಡಿ ಹಾಗೂ ಮಾಂಸದಂಗಡಿಗಳಿಂದ ರಸ್ತೆ ಒತ್ತುವರಿಯಾಗಿರುವುದಲ್ಲದೇ ರಾಜಕಾಲುವೆ ಕೂಡ ಮುಚ್ಚಿಹೋಗಿದೆ. ತಂಗುದಾಣವೂ ಇಲ್ಲ. ವಾಹನಗಳ ಬೇಕಾಬಿಟ್ಟಿ ನಿಲುಗಡೆಯಿಂದಾಗಿ ಸಂಚಾರಕ್ಕೆ ಅಡ್ಡಿಯಾಗಿರುವುದಲ್ಲದೇ ನಾಯಿಗಳ ಹಾವಳಿ ಕೂಡ ಹೆಚ್ಚಿರುವುದರಿಂದ ಜನರಿಗೆ ಸಮಸ್ಯೆಯಾಗಿ ಪರಿಣಮಿಸಿದೆ ಎನ್ನುತ್ತಾರೆ ಇಲ್ಲಿನ ಜನರು.

ಈಚೆಗೆ ಕೊಡಿಗೇನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದ ಸಾರ್ವಜನಿಕರ ಸಭೆಯಲ್ಲಿ ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಅವರಿಗೆ ರಸ್ತೆ ತೆರವು, ರಾಜಕಾಲುವೆ ತೆರವು, ಸಿಸಿ ಟಿ.ವಿ ಕ್ಯಾಮೆರಾ ಅಳವಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಆಗ ತುರ್ತಾಗಿ ತೆರವುಗೊಳಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಅವರು ಸ್ಥಳದಲ್ಲೇ ಸೂಚಿಸಿದ್ದರು.

ಸಹಕಾರ ಸಚಿವ ಕೆ.ಎನ್. ರಾಜಣ್ಣ ಹಾಗೂ ಜನಪ್ರತಿನಿಧಿಗಳಿಗೆ ಇಲ್ಲಿನ ಸ್ಥಿತಿ ತಿಳಿಸಿದ್ದಾರೆ. ಇಲ್ಲಿ ತುರ್ತಾಗಿ ಬೈಪಾಸ್, ಮಧುಗಿರಿ-ಹಿಂದೂಪುರ ನಡುವೆ ದ್ವಿಪಥ, ಮಿನಿ ವಿಧಾನಸೌದ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಸಮಯದಾಯ ಆಸ್ಪತ್ರೆ ತುರ್ತಾಗಿ ತೆರೆಯುವಂತೆ ಈ ಭಾಗದ ಜನ ಒತ್ತಾಯಿಸಿದ್ದಾರೆ.

ಕೊಡಿಗೇನಹಳ್ಳಿಯ ಗುಟ್ಟೆ ಗ್ರಾಮದ ಕಿರಿದಾದ ರಸ್ತೆಯಲ್ಲಿ ಸರ್ಕಾರಿ ಬಸ್ ತಿರುವು ಪಡೆದುಕೊಳ್ಳಲು ಸಾಹಸ ಪಡುತ್ತಿರುವ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.