ADVERTISEMENT

ತುಮಕೂರು | ಆ. 5ರಂದು ಸಿ.ಎಂ ಮನೆಗೆ ಕಟ್ಟಡ ಕಾರ್ಮಿಕರ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 15:15 IST
Last Updated 3 ಆಗಸ್ಟ್ 2024, 15:15 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ತುಮಕೂರು: ಕಾರ್ಮಿಕ ಕಲ್ಯಾಣ ಮಂಡಳಿಯ ನಿಧಿಯಲ್ಲಿ ನಡೆದಿರುವ ಅವ್ಯವಹಾರ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರ ಸಮನ್ವಯ ಸಮಿತಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸಕ್ಕೆ ಆ. 5ರಂದು ಮುತ್ತಿಗೆ ಹಾಕಲಾಗುತ್ತಿದೆ.

ಕಲ್ಯಾಣ ಮಂಡಳಿಯನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕು. ಹೈಕೋರ್ಟ್ ಆದೇಶದಂತೆ ಶೈಕ್ಷಣಿಕ ಧನ ಸಹಾಯವನ್ನು ಅರ್ಜಿ ಸಲ್ಲಿಸಿರುವ ಎಲ್ಲಾ ಅರ್ಹರಿಗೂ ಪಾವತಿಸಬೇಕು ಎಂದು ಎಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಒತ್ತಾಯಿಸಿದರು.

ADVERTISEMENT

ಕಾರ್ಮಿಕರ ಹೋರಾಟದ ಫಲವಾಗಿ 2006ರಲ್ಲಿ ಕಲ್ಯಾಣ ಮಂಡಳಿ ಸ್ಥಾಪಿಸಲಾಗಿದೆ. ನೋಂದಣಿ ವೇಳೆ ಕೆಲವು ಲೋಪದೋಷಗಳಿಂದಾಗಿ 4 ಲಕ್ಷಕ್ಕೂ ಹೆಚ್ಚು ನಕಲಿ ಕಾರ್ಮಿಕರನ್ನು ಸೇರ್ಪಡೆಮಾಡಿ ಕಾರ್ಮಿಕರ ಕಾರ್ಡ್ ನೀಡಲಾಗಿದೆ. ಇದರಲ್ಲಿ ರಾಜಕಾರಣಿಗಳ ಹಿಂಬಾಲಕರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ವಿವಿಧ ಕಿಟ್‌ಗಳ ಖರೀದಿ ನೆಪದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಆರೋಪಿಸಿದರು.

ಕಾರ್ಮಿಕರು ಹಾಗೂ ಅವರ ಮಕ್ಕಳಿಗೆ ಸವಲತ್ತು ಕೇಳಿದರೆ ಸಬೂಬು ಹೇಳಲಾಗುತ್ತಿದೆ. ಆದರೆ ಕಾರ್ಮಿಕರ ಕಿಟ್‌ಗಳ ಖರೀದಿ, ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸಲಾಗಿದೆ. ಕಲ್ಯಾಣ ನಿಧಿಯಿಂದ 2006ರಿಂದ 2018ರ ವರೆಗೆ ಕೇವಲ ₹1,500 ಕೋಟಿ ಖರ್ಚಾಗಿದ್ದರೆ, 2019ರಿಂದ 2024ರ ಅವಧಿಯಲ್ಲಿ ₹4,500-5,000 ಕೋಟಿ ಖರ್ಚು ಮಾಡಲಾಗಿದೆ. ಒಂದಕ್ಕೂ ಸರಿಯಾದ ಲೆಕ್ಕವಿಲ್ಲ. ಬಹುತೇಕ ಖರೀದಿಗಳು ಘಟನೋತ್ತರ ಅನುಮೋದನೆ ಪಡೆದುಕೊಂಡ ಪ್ರಕರಣಗಳೇ ಆಗಿವೆ ಎಂದು ದೂರಿದರು.

ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಅವ್ಯವಹಾರ ತಡೆಗಟ್ಟುವಂತೆ ಮುಖ್ಯಮಂತ್ರಿ, ಕಾರ್ಮಿಕ ಸಚಿವರಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಿಂದ ಮೆರವಣಿಗೆ ಆರಂಭಿಸಿ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಮಾಹಿತಿ ನೀಡಿದರು.

ಕಟ್ಟಡ ಕಾರ್ಮಿಕರ ಫೆಡರೇಷನ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಉಮೇಶ್, ‘ಕಲ್ಯಾಣ ಮಂಡಳಿಯು ಬೋಗಸ್ ಕಾರ್ಡ್ ನಿಯಂತ್ರಿಸುವ ನೆಪದಲ್ಲಿ ನೈಜ ಕಟ್ಟಡ ಕಾರ್ಮಿಕರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಶೈಕ್ಷಣಿಕ ಧನ ಸಹಾಯವನ್ನು ಶೇ 60ರಿಂದ 80ರಷ್ಟು ಕಡಿತ ಮಾಡಿರುವುದರಿಂದ ಬಡ ಕಟ್ಟಡ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅಡ್ಡಿಯಾಗಿದೆ’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಮುಖಂಡರಾದ ಬೋಜರಾಜ್, ಇಬಾಹಿಂ ಖಲೀಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.