ADVERTISEMENT

ಕೊರೊನಾ ರುದ್ರನರ್ತನ; ಶತಕ ದಾಟಿದ ಸೋಂಕಿತರು

ಇದೇ ಮೊದಲ ಬಾರಿಗೆ ಒಂದೇ ದಿನ 20 ಮಂದಿಗೆ ಸೋಂಕು ದೃಢ, ಹೆಚ್ಚುತ್ತಿದೆ ಆತಂಕ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 16:49 IST
Last Updated 30 ಜೂನ್ 2020, 16:49 IST

ತುಮಕೂರು: ಜಿಲ್ಲೆಯಲ್ಲಿ ಕೋವಿಡ್–19 ರುದ್ರನರ್ತನವಾಡುತ್ತಿದೆ. ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಮಂಗಳವಾರ ಒಂದೇ ದಿನ 20 ಮಂದಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಒಬ್ಬರು ಮೃತಪಟ್ಟಿದ್ದಾರೆ.

ವಾರಕ್ಕೆ ಒಂದೆರಡು ಮಂದಿಗೆ ಸೋಂಕು ದೃಢಪಟ್ಟಿರುವುದು ತಿಳಿಯುತ್ತಿತ್ತು. ಜೂನ್ 20ಕ್ಕೆ ಈ ಸಂಖ್ಯೆ 50ಕ್ಕೆ ಏರಿಕೆಯಾಗಿ ಇಬ್ಬರು ಮೃತಪಟ್ಟಿದ್ದರು. ನಂತರದ ದಿನಗಳಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕೇವಲ 10 ದಿನಗಳಲ್ಲಿ 63 ಮಂದಿಗೆ ಸೋಂಕು ತಗುಲಿದ್ದು, ನಾಲ್ಕು ಮಂದಿಯನ್ನು ಬಲಿ ಪಡೆದಿದೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು ಆರು ಮಂದಿ ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 113ಕ್ಕೆ ಏರಿಕೆಯಾಗಿದೆ. ದಿನದಿಂದ ದಿನಕ್ಕೆ ಸೋಂಕು ಹರಡುವುದು ಹೆಚ್ಚುತ್ತಿದ್ದು, ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ADVERTISEMENT

ತುಮಕೂರಿನಲ್ಲಿ 6 ಮಂದಿ: ಶ್ರೀನಗರದ 55 ವರ್ಷದ ವ್ಯಕ್ತಿಗೆ ಸೋಂಕು ತಗುಲಿದೆ. ಬಿಎಂಟಿಸಿ ಚಾಲಕರಾಗಿದ್ದು, ಕೆಮ್ಮಿನ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಮಂಗಳವಾರ ಸೋಂಕು ತಗುಲಿರುವುದು ದೃಢಪಟ್ಟಿದೆ. ಬೆಂಗಳೂರು ಪ್ರವಾಸ ಕೈಗೊಂಡಿದ್ದ ಚಿಕ್ಕಪೇಟೆ ಬಾಲಾಜಿ ರಸ್ತೆಯ 47 ವರ್ಷದ ಪುರುಷ, 47 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇನ್ನೂ ತಮಿಳುನಾಡು, ಆಂಧ್ರಪ್ರದೇಶ ಪ್ರವಾಸ ಮಾಡಿದ್ದ ಗಾಂಧಿನಗರದ 33 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಬೆಂಗಳೂರು ದೊಡ್ಡಮಲ್ಲಸಂದ್ರದ 53 ವರ್ಷದ ವ್ಯಕ್ತಿ ತುಮಕೂರಿನಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಂಡಿದ್ದು, ಇವರಿಗೂ ಸೋಂಕು ದೃಢಪಟ್ಟಿದೆ.

ಯುವಕ ಸಾವು
ತುಮಕೂರು ನಗರದ ಮರಳೂರು ದಿಣ್ಣೆಯ 29 ವರ್ಷದ ಯುವಕ ಜೂನ್ 26ರಂದು ಅಪಘಾತ ಸಂಭವಿಸಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಂಗಳವಾರ ಮೃತಪಟ್ಟಿದ್ದು, ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದಾಗ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರ ಪ್ರಯಾಣದ ಮಾಹಿತಿ, ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.