ADVERTISEMENT

ತುಮಕೂರು: ಆಟೊಗೂ ಪ್ರಯಾಣಿಕರ ಕೊರತೆ

​ಪ್ರಜಾವಾಣಿ ವಾರ್ತೆ
Published 19 ಮೇ 2020, 12:17 IST
Last Updated 19 ಮೇ 2020, 12:17 IST
ಬಿ.ಎಚ್‌.ರಸ್ತೆಯ ಬದಿ ಆಟೊಗಳನ್ನು ನಿಲ್ಲಿಸಿ, ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಚಾಲಕರು
ಬಿ.ಎಚ್‌.ರಸ್ತೆಯ ಬದಿ ಆಟೊಗಳನ್ನು ನಿಲ್ಲಿಸಿ, ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಚಾಲಕರು   

ತುಮಕೂರು: ಲಾಕ್‌ಡೌನ್‌ ಸಡಿಲಿಸಿ ಆಟೊ ಸಂಚಾರ ಸೇವೆಗೆ ಅನುವು ಮಾಡಿಕೊಡಲಾಗಿದೆ. ಆದರೆ, ಪ್ರಯಾಣಿಕರೆ ಇಲ್ಲದೆ ಚಾಲಕರಿಗೆ ಗಳಿಕೆಯೇ ಇಲ್ಲವಾಗಿದೆ.

ಲಾಕ್‌ಡೌನ್‌ಗೂ ಮುನ್ನ ಒಂದೊಂದು ಆಟೊದಲ್ಲಿ ನಾಲ್ಕು ಜನರನ್ನು ಕೂರಿಸಿಕೊಂಡು ಹೋಗುವಷ್ಟು ಪ್ರಯಾಣಿಕರು ಸಿಗುತ್ತಿದ್ದರು. ಈಗ ಒಬ್ಬ ಪ್ರಯಾಣಿಕರನ್ನು ಹುಡುಕಲು ಸಹ ಚಾಲಕರು ಆಟೊಗಳನ್ನು ನಗರದ ಪ್ರಮುಖ ರಸ್ತೆಗಳನ್ನು ಸುತ್ತಿಸುತ್ತಿದ್ದಾರೆ. ಇದರಿಂದ ಇಂಧನ ವ್ಯಯ ಆಗುತ್ತಿದೆಯೇ ಹೊರತು ಒಂದಿಷ್ಟು ಆದಾಯವೂ ಕೈಗೆಟುಕುತ್ತಿಲ್ಲ.

‘ಸರ್ಕಾರಿ ಕಚೇರಿಗಳು ತೆರೆದಿದ್ದರೂ, ಶಾಲಾ– ಕಾಲೇಜುಗಳು ಆರಂಭವಾಗಿಲ್ಲ. ಜನರು ಮನೆಯಿಂದ ಬರಲು ಸಹ ಹೆದರುತ್ತಿದ್ದಾರೆ. ನಾನು ಬೆಳಿಗ್ಗೆ 7 ಗಂಟೆಗೆ ಆಟೊದೊಂದಿಗೆ ರಸ್ತೆಗಿಳಿದೆ. ಮಧ್ಯಾಹ್ನ 3 ಗಂಟೆಯವರೆಗೆ ಕೇವಲ ₹90 ಗಳಿಕೆಯಾಗಿದೆ’ ಎಂದರು ಆಟೊ ಚಾಲಕ ನಾಗರಾಜು.

ADVERTISEMENT

‘ಬೆಳಿಗ್ಗೆಯಿಂದ 10 ಕಿ.ಮೀ. ಖಾಲಿ ಆಟೊದಲ್ಲೇ ಸುತ್ತಿದ್ದೇನೆ. ಎಸ್‌ಐಟಿಹಿಂಬದಿ ಗೇಟ್‌, ಬಿ.ಎಚ್‌.ರಸ್ತೆಯಲ್ಲಿ ಮಧ್ಯಾಹ್ನದ ವರೆಗೂ ಸಂಚರಿಸಿದರೂ ಒಬ್ಬರೂ ಪ್ಯಾಸೆಂಜರ್‌ ಸಿಕ್ಕಿಲ್ಲ. ಸಂಜೆಯಾದರೂ ಬೋಣಿನೂ ಆಗಿಲ್ಲ. ಹೀಗಾದರೆ ಬದುಕುವುದು ಹೇಗೆ’ ಎಂದು ಪ್ರಶ್ನಿಸಿದರು ಮತ್ತೊಬ್ಬ ಆಟೊ ಚಾಲಕ ಚಂದ್ರಶೇಖರ್‌.

‘ಒಂದಿಷ್ಟು ಗಳಿಕೆ ಆದರೆ, ಮನೆ ನಿರ್ವಹಣೆ ಖರ್ಚಿಗೆ ಆಗುತ್ತದೆ ಎಂದು ಆಟೊ ರಸ್ತೆಗಿಳಿಸಿದ್ದೇನೆ. ನಗರದಲ್ಲಿ ಆಟೊಗಳ ಸಂಖ್ಯೆಯೂ ಜಾಸ್ತಿ ಇರುವುದರಿಂದ ಪ್ರಯಾಣಿಕರು ಸಿಗುತ್ತಿಲ್ಲ. ಒಂದು ಆಟೊದಲ್ಲಿ ಇಬ್ಬರೇ ಪ್ರಯಾಣಿಕರನ್ನು ಕರೆದೊಯ್ಯಬೇಕು ಎಂಬ ನಿಯಮವಿದೆ. ಹಾಗಾಗಿ ಕ್ಯಾತ್ಸಂದ್ರದಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಕರೆದೊಯ್ಯಲು ₹30 ನಿಗದಿಪಡಿಸಿದ್ದೇವೆ. ಮಧ್ಯದಲ್ಲಿ ಎಲ್ಲಿಯೇ ಹತ್ತಿ, ಬಸ್‌ ನಿಲ್ದಾಣದವರೆಗೆ ಪ್ರಯಾಣಿಸಿದರೆ, ₹ 20 ಪಡೆಯುತ್ತಿದ್ದೇವೆ’ ಎಂದು ಚಾಲಕ ರವಿ ತಿಳಿಸಿದರು.

‘ಸ್ವಂತ ಆಟೊ ಇದ್ದು, ಎಲ್ಲ ದಾಖಲೆಗಳು ಸರಿಯಾಗಿ ಇದ್ದರೆ ಮಾತ್ರ ಸರ್ಕಾರ ಘೋಷಿಸಿರುವ ಪ್ಯಾಕೇಜ್‌ನಲ್ಲಿ ₹ 5000 ಸಿಗುತ್ತದೆ. ಬಹುತೇಕ ಚಾಲಕರು ಬಾಡಿಗೆ ಆಟೊಗಳನ್ನು ಓಡಿಸುತ್ತಿದ್ದಾರೆ. ಅವರು ಪ್ಯಾಕೇಜ್‌ನ ಪರಿಹಾರದಿಂದ ವಂಚಿತರಾಗುತ್ತಾರಲ್ಲ’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.