ADVERTISEMENT

ತುಮಕೂರು: ಕೊರೊನಾ ಸೋಂಕಿನ ವಿರುದ್ಧ ಕೆಲಸ, ಮನೋವೈದ್ಯರಿಂದ ಕೌನ್ಸೆಲಿಂಗ್

ಜಿಲ್ಲಾಧಿಕಾರಿಯಿಂದ ವೈದ್ಯಕೀಯ ಸಿಬ್ಬಂದಿಗೆ ಪಾಠ

ಡಿ.ಎಂ.ಕುರ್ಕೆ ಪ್ರಶಾಂತ
Published 8 ಏಪ್ರಿಲ್ 2020, 19:45 IST
Last Updated 8 ಏಪ್ರಿಲ್ 2020, 19:45 IST
   

ತುಮಕೂರು: ಜಿಲ್ಲಾ ಆಸ್ಪತ್ರೆ ಈಗ ಕೋವಿಡ್–19 ಆಸ್ಪತ್ರೆಯಾಗಿ ಪರಿವರ್ತನೆ ಆಗಿದೆ. ಸಾಮಾನ್ಯ ಜನರಿಗೆ ಇರುವಂತೆಯೇ ಇಲ್ಲಿ ಕಾರ್ಯ ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿ ಹಾಗೂ ಅವರ ಕುಟುಂಬದವರಲ್ಲೂ ಕೊರೊನಾ ಸೋಂಕಿನ ಭೀತಿ ಕಾಡುತ್ತಿದೆ. ಕೆಲಸಕ್ಕೆ ಹೋದವರು ಸುರಕ್ಷಿತವಾಗಿ ಮನೆಗೆ ಮರಳಲಿ ಎಂದು ಕುಟುಂಬಗಳು ಪ್ರಾರ್ಥಿಸುತ್ತಿವೆ.

ಹೀಗೆ ಭಯಕ್ಕೆ ಒಳಗಾಗುತ್ತಿರುವ ಸಿಬ್ಬಂದಿಗೆ ಧೈರ್ಯ, ಆತ್ಮವಿಶ್ವಾಸ ತುಂಬಲು ಮತ್ತು ಪ್ರೇರಣಾದಾಯವಾಗಿ ಕೆಲಸ ಮಾಡಲು ಮನೋವೈದ್ಯರಿಂದ ಕೌನ್ಸೆಲಿಂಗ್ ಸಹ ಕೊಡಿಸಲಾಗುತ್ತಿದೆ. ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ಸಹ ಎರಡು ಬಾರಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಆತ್ಮವಿಶ್ವಾಸ ಮೂಡಿಸುವ ಪಾಠ ಹೇಳಿದ್ದಾರೆ.

ವೈದ್ಯರು ಹಾಗೂ ಸಿಬ್ಬಂದಿಗೆ ಮನೋವೈದ್ಯರಾದ ಡಾ.ಮಾಲಿನಿ ಗೋವಿಂದನ್ ಅವರಿಂದ ಕೌನ್ಸೆಲಿಂಗ್ ಸಹ ನಡೆಸಲಾಗಿದೆ. ಮಾಲಿನಿ ಅವರು ಸಿಬ್ಬಂದಿಗೆ ಸಾಮೂಹಿಕವಾಗಿ ಕೌನ್ಸೆಲಿಂಗ್ ನಡೆಸಿದ್ದರೆ, ಕೆಲವರಿಗೆ ವೈಯಕ್ತಿಕವಾಗಿ ಕೌನ್ಸೆಲಿಂಗ್ ಮಾಡಿದ್ದಾರೆ.

ADVERTISEMENT

‘ಕೊರೊನಾ ವಿಚಾರವಾಗಿ ಹರಡಿರುವ ಸುಳ್ಳುಗಳು ಮತ್ತು ಅದರಿಂದ ಉಂಟಾಗಿರುವ ಭಯ’ದ ಕುರಿತು ಕೌನ್ಸೆಲಿಂಗ್ ನಡೆಸಿದ್ದಾರೆ. ಈ ಕೌನ್ಸೆಲಿಂಗ್ ಆತಂಕ ಮತ್ತು ಅಧೈರ್ಯಕ್ಕೆ ತುತ್ತಾಗಿದ್ದ ಸಿಬ್ಬಂದಿಯಲ್ಲಿ ವಿಶ್ವಾಸ ಮೂಡಿಸಿದೆ ಎನ್ನುತ್ತವೆ ಜಿಲ್ಲಾ ಆಸ್ಪತ್ರೆ ಮೂಲಗಳು.

ಕಾರ್ಯ ನಿರ್ವಹಣೆ: ಕೊರೊನಾ ಚಿಕಿತ್ಸೆಗೆ ಆರು ವಾರ್ಡ್‌ಗಳನ್ನು ರೂಪಿಸಲಾಗಿದೆ. ಪಾಸಿಟಿವ್, ನೆಗೆಟಿವ್ ಪ್ರಕರಣ, ಐಸಿಯು ವಾರ್ಡ್‌ಗಳು ಪ್ರತ್ಯೇಕವಾಗಿವೆ. ಆರು ವಾರ್ಡ್‌ಗಳಲ್ಲಿ ಒಮ್ಮೆ ತಲಾ ಇಬ್ಬರು ಶುಶ್ರೂಷಕಿಯರು, ಇಬ್ಬರು ‘ಡಿ’ ದರ್ಜೆ ನೌಕರರು ಕೆಲಸ ಮಾಡುತ್ತಾರೆ. ಪ್ರತಿ ಆರು ತಾಸಿಗೆ ಒಮ್ಮೆ ಈ ಪಾಳಿ ಬದಲಾವಣೆ ಆಗುತ್ತದೆ. ಆಸ್ಪತ್ರೆಯಲ್ಲಿ 43 ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ.

ರಕ್ತದ ಒತ್ತಡ, ಮಧುಮೇಹ, ಮೂತ್ರಪಿಂಡ ಹೀಗೆ ಕೆಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಸಿಬ್ಬಂದಿ ಹಾಗೂ ಗರ್ಭಿಣಿಯರಿಗೆ ಕೆಲಸ ಮಾಡಲು ವಿನಾಯಿತಿ ಸಹ ನೀಡಲಾಗಿದೆ.

ತಾಲ್ಲೂಕು ಆಸ್ಪತ್ರೆ ಅಥವಾ ಕೇಂದ್ರಗಳಲ್ಲಿ ಯಾವುದೇ ಕಾರಣಕ್ಕೂ ಕೋವಿಡ್ ಸೋಂಕಿತರು ಅಥವಾ ಶಂಕಿತರಿಗೆ ಚಿಕಿತ್ಸೆ ನೀಡಬಾರದು. ಅವರನ್ನು ಜಿಲ್ಲಾ ಕೇಂದ್ರದ ಕೋವಿಡ್ ಆಸ್ಪತ್ರೆಗೆ ದಾಖಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚನೆ ನೀಡಿದ್ದಾರೆ. ಸೋಂಕಿನ ಶಂಕೆ ಹಿನ್ನೆಲೆಯಲ್ಲಿ ತಾಲ್ಲೂಕು ಆಸ್ಪತ್ರೆಗಳಿಗೆ ಬರುವವರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

‘ಸುರಕ್ಷಾ ಸಾಧನಗಳನ್ನು ಧರಿಸಿಯೇ ಕೆಲಸ ಮಾಡುತ್ತಿದ್ದೇವೆ. ನಮಗೂ ಕುಟುಂಬ, ಮಕ್ಕಳು ಇದ್ದಾರೆ. ಆರಂಭದಲ್ಲಿ ಭಯ ಇದ್ದೇ ಇತ್ತು. ವೈದ್ಯರು ಮತ್ತು ಇತರ ಸಿಬ್ಬಂದಿಯ ಕೆಲಸ ನೋಡಿ ನನಗೂ ಕೆಲಸ ಮಾಡಲು ಧೈರ್ಯ ಬಂದಿತು’ ಎನ್ನುತ್ತಾರೆ ಹೆಸರು ಬರೆಯಬೇಡಿ ಎನ್ನುವ ಶುಶ್ರೂಷಕಿಯೊಬ್ಬರು.

ಜಿಲ್ಲೆಯಲ್ಲಿ ಕೋವಿಡ್‌–19 ರೋಗದಿಂದ ಶಿರಾದ ವ್ಯಕ್ತಿ ಮೃತಪಟ್ಟಾಗ ಅವರಿಗೆ ಚಿಕಿತ್ಸೆ ನೀಡಿದ್ದ ಇಬ್ಬರು ಖಾಸಗಿ ಕ್ಲಿನಿಕ್‌ನ ವೈದ್ಯರು, ಶುಶ್ರೂಷಕಿಯರು, ಲ್ಯಾಬ್ ಟೆಕ್ನಿಶಿಯನ್ ಹಾಗೂ ಜಿಲ್ಲಾ ಆಸ್ಪತ್ರೆಯ ವೈದ್ಯರೊಬ್ಬರನ್ನು ಐಸೊಲೇಷನ್‌ನಲ್ಲಿ ಇರಿಸಿದ್ದನ್ನು ಸ್ಮರಿಸಬಹುದು.

ಮನೆಯವರಿಂದಲೇ ಧೈರ್ಯ
‘ನನಗೆ ನಮ್ಮ ಕುಟುಂಬದವರೇ ಹೆಚ್ಚು ಧೈರ್ಯ ತುಂಬಿದರು. ಇದು ನಿಮ್ಮ ಕೆಲಸದ ಒಂದು ಭಾಗ. ಧೈರ್ಯವಾಗಿರಿ ಎಂದರು. ಹೀಗೆ ಮನೆಯವರೇ ಧೈರ್ಯ ತುಂಬಿದ ಕಾರಣ ನನ್ನ ಆತ್ಮವಿಶ್ವಾಸವನ್ನೂ ವೃದ್ಧಿಸಿತು’ ಎಂದು ಜಿಲ್ಲಾ ಆಸ್ಪತ್ರೆ ವೈದ್ಯ ರೇಣುಕೇಶ್ ಹೇಳುತ್ತಾರೆ.

‘ಕೋವಿಡ್ ಆಸ್ಪತ್ರೆಯಲ್ಲಿ ಕೆಲಸದಲ್ಲಿ ತೊಡಗಿರುವ ಸಿಬ್ಬಂದಿ ಸವಾಲುಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿದ್ದೇವೆ’ ಎಂದರು.

‘ಇಂತಹ ಅಪಾಯದ ಜವಾಬ್ದಾರಿ ತೆಗೆದುಕೊಳ್ಳಬೇಕಾ ಎಂದು ಒಮ್ಮೆ ಎನಿಸುತ್ತದೆ. ಆದರೆ ಜನರು ನಮ್ಮನ್ನು ಈ ವೇಳೆ ಸೈನಿಕರು ಎನ್ನುತ್ತಿದ್ದಾರೆ. ಜನರ ಆರೋಗ್ಯ ರಕ್ಷಣೆ ನಮ್ಮ ಪ್ರಮುಖ ಜವಾಬ್ದಾರಿ’ ಎಂದು ತಿಳಿಸಿದರು.

‘ಸಂಕಲ್ಪ ಶಕ್ತಿ’ ಹೆಚ್ಚಳ
‘ಇಂತಹ ಸಂದರ್ಭದಲ್ಲಿ ವೈದ್ಯರಿಗೆ ಭಯ, ಸವಾಲುಗಳು ಹೆಚ್ಚು ಇರುತ್ತವೆ. ನಮ್ಮ ಸಿಬ್ಬಂದಿ ಆರಂಭದಲ್ಲಿ ಭಯಪಟ್ಟರೂ ನಂತರ ತಮ್ಮ ಸಂಕಲ್ಪ ಶಕ್ತಿ (ವಿಲ್ ಪವರ್) ಹೆಚ್ಚಿಸಿಕೊಂಡರು. ಚಿಕಿತ್ಸೆ ಸಮಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುತ್ತಿದ್ದಾರೆ’ ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಟಿ.ಎ.ವೀರಭದ್ರಯ್ಯ ತಿಳಿಸಿದರು.

‘ನನ್ನ ವೃತ್ತಿ ಜೀವನದಲ್ಲೇ ಇಷ್ಟು ಭಯ ಹುಟ್ಟಿಸಿದ ಸೋಂಕಿನ ರೋಗಗಳನ್ನು ಕಂಡಿರಲಿಲ್ಲ. ಸೋಂಕು ತಗುಲಿದರೆ ಮೃತಪಡುತ್ತಾರೆ ಎನ್ನುವ ಆತಂಕ ಸಿಬ್ಬಂದಿಯಲ್ಲಿ ಇತ್ತು. ಭಯವನ್ನು ಹಂತ ಹಂತವಾಗಿ ಹೋಗಲಾಡಿಸಲಾಯಿತು’ ಎಂದರು.

ಕೆಲಸದಲ್ಲಿ ತೊಡಗುವ ಸಿಬ್ಬಂದಿ ವೈಯಕ್ತಿಕ ಸುರಕ್ಷಾ ಸಲಕರಣೆಗಳನ್ನು ಬಳಸುತ್ತಿದ್ದಾರೆ. ಐಸಿಯುನಲ್ಲಿ ಕೆಲಸ ಮಾಡುವವರಿಗೆ ಸ್ವಲ್ಪ ಮಟ್ಟಿನ ಭಯ ಹೆಚ್ಚಿರುತ್ತದೆ. ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.