ADVERTISEMENT

ತುಮಕೂರು | ಜಿಲ್ಲೆಯಲ್ಲಿ 16ಕ್ಕೇರಿದ ಕೊರೊನಾ ಸೋಂಕು

ಮುಂಬೈನಿಂದ ಬಂದ ಐದು ಮಂದಿಯಲ್ಲಿ ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 21 ಮೇ 2020, 14:09 IST
Last Updated 21 ಮೇ 2020, 14:09 IST
ಕೊರೊನಾ ವೈರಸ್‌
ಕೊರೊನಾ ವೈರಸ್‌   

ತುಮಕೂರು: ಮುಂಬೈನಿಂದ ಬಂದ ನಾಲ್ಕು ಮಂದಿಯಲ್ಲಿ ಕೊರೊನಾ ಸೋಂಕು ಬುಧವಾರ ಪತ್ತೆಯಾದ ಬೆನ್ನಲೇ ಗುರುವಾರ ಮತ್ತೊಬ್ಬರಿಗೆ ಸೋಂಕು ತಗುಲಿದೆ. ಈ ವ್ಯಕ್ತಿಯೂ ಮುಂಬೈನಿಂದ ನಗರಕ್ಕೆ ಬಂದಿದ್ದಾರೆ.

ಖಾದರ್ ನಗರದ 58 ವರ್ಷದ ವ್ಯಕ್ತಿ ಮುಂಬೈನಿಂದ ಬಂದು ತನ್ನ ಮನೆಯಲ್ಲಿ ಇದ್ದರು. ಜಿಲ್ಲಾಡಳಿತಕ್ಕೆ ಮಾಹಿತಿ ತಿಳಿಯಿತು. ಅವರನ್ನು ಮನೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿತ್ತು. ಇವರಿಗೆ ಪತ್ನಿ ಮತ್ತು ನಾಲ್ಕು ಮಕ್ಕಳು ಇದ್ದಾರೆ.

ಸೋಂಕು ಪತ್ತೆಯಾದ ನಂತರ ಖಾದರ್ ನಗರವನ್ನು ಜಿಲ್ಲಾಡಳಿತ ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಿದೆ. ಸಂಪರ್ಕ ರಸ್ತೆಗಳಿಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಪೊಲೀಸರನ್ನು ನಿಯೋಜಿಸಲಾಗಿದೆ.

ADVERTISEMENT

ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 16ಕ್ಕೇರಿದೆ. 9 ಸಕ್ರಿಯ ಪ್ರಕರಣಗಳಿದ್ದು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬೈ ಸೇರಿದಂತೆ ಹೊರರಾಜ್ಯದಿಂದ ಬಂದ ವ್ಯಕ್ತಿಗಳ ಬಗ್ಗೆ ಜಿಲ್ಲಾಡಳಿತ ಇಲ್ಲವೆ ತಾಲ್ಲೂಕು ಆಡಳಿತಕ್ಕೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಹೆಚ್ಚುತ್ತಿದೆ ತಪಾಸಣೆ: ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಇಲ್ಲಿಯವರೆಗೂ ಜಿಲ್ಲೆಯಲ್ಲಿ 8,077 ಮಾದರಿಗಳ ಗಂಟಲು ದ್ರವ ಮತ್ತು ಕಫದ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಹೊರರಾಜ್ಯಗಳಿಂದ ಬರುವವರ ಸಂಖ್ಯೆ ಹೆಚ್ಚಿದಂತೆ ತಪಾಸಣೆಗೆ ಒಳಪಡುವವರ ಸಂಖ್ಯೆಯೂ ಏರುತ್ತಿದೆ.

ಇದರಲ್ಲಿ 7,009 ಮಾದರಿಗಳು ನೆಗೆಟಿವ್ ಬಂದಿವೆ. 1,014 ಮಾದರಿಗಳ ಪರೀಕ್ಷೆಯ ವರದಿ ಬಾಕಿ ಇದೆ. ಗುರುವಾರ ಒಂದೇ ದಿನ 200 ಮಾದರಿ ಸಂಗ್ರಹಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.