ತುಮಕೂರು: ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ. ಆದರೆ ಮಾಸ್ಕ್ ಧರಿಸದವರಿಗೆ ₹1 ಸಾವಿರ ದುಬಾರಿ ದಂಡ ವಿಧಿಸುವ ಮೂಲಕ ಜನಸಾಮಾನ್ಯರ ಲೂಟಿಗೆ ಸರ್ಕಾರ ಇಳಿದಿದೆ ಎಂದು ಸಿಪಿಐ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ದುಬಾರಿ ಶುಲ್ಕ ವಿಧಿಸುವುದನ್ನು ತಕ್ಷಣ ಹಿಂಪಡೆಯಬೇಕು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ನಗರ ಕಾರ್ಯದರ್ಶಿ ಎಸ್.ರಾಘವೇಂದ್ರ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.
ಕೋವಿಡ್–19 ನಿಯಂತ್ರಣಕ್ಕೆ ಮಾಸ್ಕ್ ಧರಿಸುವುದು ಕಡ್ಡಾಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು, ಸ್ವಯಂಪ್ರೇರಿತವಾಗಿ ಧರಿಸುವಂತೆ ಮಾಡಬೇಕು. ಅದು ಬಿಟ್ಟು ದುಬಾರಿ ದಂಡ ವಸೂಲಿಗೆ ಮುಂದಾಗಿರುವುದು ಬಿಜೆಪಿ ನೇತೃತ್ವದ ಸರ್ಕಾರವು ರಾಜ್ಯದ ಜನತೆಗೆ ನೀಡುತ್ತಿರುವ ಕಿರುಕುಳವಾಗಿದೆ. ಈಗಾಗಲೇ ಲಾಕ್‌ಡೌನ್, ಆರ್ಥಿಕ ಹಿನ್ನಡೆಯಿಂದಾಗಿ ಸಂಕಷ್ಟದಲ್ಲಿ ಇರುವ ಜನರಿಗೆ ಇದು ಮತ್ತೊಂದು ಹೊರೆಯಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನರಲ್ಲಿ ಅರಿವು ಮೂಡಿಸುವಲ್ಲಿ ವಿಫಲವಾಗಿರುವ ಸರ್ಕಾರವು ಒಂದರ ನಂತರ ಒಂದರಂತೆ ದಬ್ಬಾಳಿಕೆ ನಡೆಸುತ್ತಿದೆ. ಸರ್ಕಾರಕ್ಕೆ ಜನರ ಬಗ್ಗೆ ಕಾಳಜಿ ಇಲ್ಲದಿರುವುದು ತೋರುತ್ತದೆ. ಕೋವಿಡ್ ಚಿಕಿತ್ಸೆಗೆ ಉಪಕರಣಗಳ ಖರೀದಿ, ಆರೈಕೆ ಕೇಂದ್ರಗಳ ಸ್ಥಾಪನೆ ಹಾಗೂ ಖರ್ಚು ವೆಚ್ಚಗಳಲ್ಲಿ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ತೊಡಗಿದೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.