ADVERTISEMENT

ಕ್ಯಾತ್ಸಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್‌

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 5:25 IST
Last Updated 23 ಏಪ್ರಿಲ್ 2021, 5:25 IST

ತುಮಕೂರು: ಕೋವಿಡ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚಳವಾಗುತ್ತಿದ್ದು, ನಗರ ಸೇರಿದಂತೆ ಎಲ್ಲಾ ತಾಲ್ಲೂಕುಗಳಲ್ಲಿ ಕನಿಷ್ಠ 200 ಹಾಸಿಗೆ ಸಾಮರ್ಥ್ಯದ ಕೋವಿಡ್ ಕೇರ್ ಸೆಂಟರ್‌ಗಳನ್ನು ಪ್ರಾರಂಭಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಕಟಿಸಿದರು.

ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಹಾಗೂ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಳೆದ ಬಾರಿಯಂತೆ ತುಮಕೂರಿನ ಕ್ಯಾತ್ಸಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಅನ್ನು ಇಂದಿನಿಂದ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರತಿ ತಾಲ್ಲೂಕಿನಲ್ಲಿ 200 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗುವುದು. ಇದಕ್ಕೆ ವಸತಿ ನಿಲಯಗಳನ್ನು ಬಳಸಿಕೊಳ್ಳಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಈ ಕೇಂದ್ರಗಳಿಗೆ ಜಿಲ್ಲಾಡಳಿತದಿಂದ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುವುದು ಎಂದರು.

ADVERTISEMENT

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ಗೌರವಯುತವಾಗಿ ಮಾಡಬೇಕು. ಮೃತದೇಹಗಳನ್ನು ಹೆಚ್ಚು ಸಮಯ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳಬೇಡಿ. ತಕ್ಷಣವೇ ಅಂತ್ಯಸಂಸ್ಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡಿಎಚ್‍ಒ, ಡಿಎಸ್‌ಗೆ ಸೂಚಿಸಿದರು.

ನಗರದಲ್ಲಿರುವ ಚಿತಾಗಾರ ನಿರ್ವಹಣೆ ಮಾಡಲು ಟಿಜಿಎಂಸಿ ಬ್ಯಾಂಕ್ ಮುಂದೆ ಬಂದಿದೆ. ಈಗಿರುವ ಒಂದು ಒಲೆ ಜೊತೆಗೆ ಇನ್ನು ಮೂರು ಒಲೆಗಳನ್ನು ನಿರ್ಮಿಸುವಂತೆ ಕೋರಿದ್ದು, ನಿರ್ವಹಣೆಯನ್ನು ಅವರಿಗೆ ವಹಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಇನ್ನುಳಿದ ಸ್ಮಶಾನಗಳನ್ನು ಮಹಾನಗರ ಪಾಲಿಕೆ ನಿರ್ವಹಿಸಬೇಕು. ಸ್ಮಶಾನ, ಚಿತಾಗಾರದಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗಳಿಗೆ ತಕ್ಷಣವೇ ವೇತನ ಪಾವತಿಸುವಂತೆ ಪಾಲಿಕೆ ಆಯುಕ್ತೆ ರೇಣುಕಾ ಅವರಿಗೆ ನಿರ್ದೇಶಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಎರಡು ವೈದ್ಯಕೀಯ ಕಾಲೇಜುಗಳನ್ನು ಬಳಕೆಮಾಡಿಕೊಳ್ಳಲಾಗುತ್ತಿದೆ. ಶ್ರೀದೇವಿ ಕಾಲೇಜಿನಲ್ಲಿ ಸೋಂಕಿತರನ್ನು ದಾಖಲು ಮಾಡಲಾಗುತ್ತಿದೆ. ಸಿದ್ಧಾರ್ಥ ಆಸ್ಪತ್ರೆಗೆ 26 ಸೋಂಕಿತರನ್ನು ದಾಖಲು ಮಾಡಲಾಗಿದೆ. ಸಿದ್ಧಗಂಗಾ, ಅಶ್ವಿನಿ ಆಸ್ಪತ್ರೆ ಸೇರಿದಂತೆ ಇನ್ನಿತರ ಖಾಸಗಿ ಆಸ್ಪತ್ರೆಗಳಲ್ಲಿ 500ರಿಂದ 600 ಹಾಸಿಗೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲು ಸೂಚಿಸಲಾಗಿದೆ’ ಎಂದರು.

ಗ್ರಾಮೀಣ ಭಾಗಗಳಲ್ಲಿ ಟೆಸ್ಟ್ ಮಾಡಲು ಲ್ಯಾಬ್ ಆನ್ ವೀಲ್ ವಾಹನವನ್ನು ಬಳಕೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ವ್ಯವಸ್ಥೆಯಿಂದ ಸೋಂಕಿತರನ್ನು ಶೀಘ್ರ ಪತ್ತೆ ಹಚ್ಚಲು ನೆರವಾಗಲಿದೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಮುಖಂಡರಾದ ಸೊಗಡು ಶಿವಣ್ಣ, ಡಾ.ಎಂ.ಆರ್.ಹುಲಿನಾಯ್ಕರ್ ಇದ್ದರು.

ವರ್ತಕರ ಸಭೆ: ಇದಕ್ಕೂ ಮುನ್ನ ವರ್ತಕರ ಸಂಘದ ಪ್ರತಿನಿಧಿಗಳ ಸಭೆಯನ್ನು ಸಚಿವರು ನಡೆಸಿದರು.

ಪೊಲೀಸರು ಬಲವಂತವಾಗಿ ಅಂಗಡಿ ಮುಚ್ಚಿಸುವ ಪರಿಸ್ಥಿತಿ ತಲೆದೋರದಂತೆ ಕೋವಿಡ್ ಸೋಂಕಿನ ಬಗ್ಗೆ ಅರಿತು ಸ್ವಯಂ ಪ್ರೇರಿತವಾಗಿ ಮಾರ್ಗಸೂಚಿಗಳನ್ನು ಪಾಲಿಸುವಂತೆ ತಿಳಿಸಿದರು.

‘ಪ್ರತಿನಿತ್ಯ ವರ್ತಕರಿಗೆ 4ರಿಂದ 6 ಗಂಟೆ ಕಾಲ ವಹಿವಾಟು ನಡೆಸಲು ಕಾಲಾವಕಾಶ ಕಲ್ಪಿಸಿದರೆ ಉತ್ತಮ ಎನ್ನುವುದು ನನ್ನ ಭಾವನೆ. ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ. ಸರ್ಕಾರ ಒಪ್ಪದಿದ್ದರೆ ಮಾರ್ಗಸೂಚಿ ಪಾಲಿಸಲೇಬೇಕು. ದೇಶಕ್ಕೆ ಗಂಡಾಂತರ ಬಂದಾಗ ಸರ್ಕಾರದ ಆದೇಶದಂತೆ ನಡೆಯಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.