ADVERTISEMENT

ತುಮಕೂರು: ವಿದ್ಯಾಪೀಠದಲ್ಲಿ ಕೋವಿಡ್ ಸೆಂಟರ್

​ಪ್ರಜಾವಾಣಿ ವಾರ್ತೆ
Published 14 ಮೇ 2021, 7:57 IST
Last Updated 14 ಮೇ 2021, 7:57 IST
ತುಮಕೂರು ರೇಣುಕಾ ವಿದ್ಯಾಪೀಠದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ
ತುಮಕೂರು ರೇಣುಕಾ ವಿದ್ಯಾಪೀಠದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ   

ತುಮಕೂರು: ನಗರದ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲೇ ಇರುವ ರೇಣುಕಾ ವಿದ್ಯಾಪೀಠದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದ್ದು, ಶನಿವಾರದಿಂದ ಕಾರ್ಯ ಆರಂಭಿಸಲಿದೆ.

ವೀರಶೈವ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಈ ಕೇಂದ್ರ ಆರಂಭಿಸಲಾಗಿದೆ ಎಂದು ಬಿಜೆಪಿ ಮುಖಂಡ ಸೊಗಡು ಶಿವಣ್ಣ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಹೋಮ್ ಕ್ವಾರಂಟೈನ್‌ನಿಂದ ಕೊರೊನಾ ಸೋಂಕು ಹರಡುತ್ತಿದ್ದು, ಇದನ್ನು ನಿಯಂತ್ರಿಸುವುದಕ್ಕಾಗಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಸೋಂಕಿತರ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಆಹಾರ, ಮೊಟ್ಟೆ ನೀಡಲು ಕ್ರಮವಹಿಸಲಾಗುವುದು. ಉಚಿತವಾಗಿ ಊಟ ನೀಡಲಾಗುವುದು. ಜಿಲ್ಲಾ ಆಸ್ಪತ್ರೆ ವೈದ್ಯರು ರೋಗಿಗಳ ಮೇಲ್ವಿಚಾರಣೆ ನಡೆಸಲಿದ್ದು, ಅಗತ್ಯ ಇರುವವರಿಗೆ ಆಮ್ಲಜನಕ ಒದಗಿಸಲಾಗುವುದು ಎಂದು ವಿವರಿಸಿದರು.

ADVERTISEMENT

ಅಂತ್ಯ ಸಂಸ್ಕಾರಕ್ಕೆ ಟಿಂಬರ್ ಮರ್ಚೆಂಟ್‌ಗಳು ಸೌದೆ ನೀಡಿದ್ದಾರೆ. ಅಂತ್ಯ ಸಂಸ್ಕಾರ ನೆರವೇರಿಸಲು ಬಜರಂಗದಳದ ಯುವಕರು ಮುಂದಾಗಿದ್ದಾರೆ. ನಾಗರಾಜು ಮೊ 9945942319 ಇವರಿಗೆ ಕರೆ ಮಾಡಿದರೆ ಆಂಬುಲೆನ್ಸ್‌ ಜತೆ ಬಂದು ಅಂತ್ಯ ಸಂಸ್ಕಾರ ಮಾಡಲಿದ್ದಾರೆ ಎಂದು ಹೇಳಿದರು.

ನಗರ ವೀರಶೈವ ಸಮಾಜದ ಅಧ್ಯಕ್ಷ ಟಿ.ಬಿ.ಶೇಖರ್, ‘ಬಿಸಿ ನೀರಿನ ವ್ಯವಸ್ಥೆ ಮಾಡಲಾಗಿದ್ದು, ರೋಟರಿ ವತಿಯಿಂದ ಆರ್‌ಟಿಪಿಸಿಆರ್ ಯೂನಿಟ್ ಸ್ಥಾಪಿಸಲಾಗುತ್ತಿದೆ. ಮನರಂಜನೆಗಾಗಿ ಎಲ್‌ಇಡಿ ಅಳವಡಿಸಲಾಗುವುದು’ ಎಂದು ತಿಳಿಸಿದರು.

ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಎನ್.ಎಸ್.ಜಯಕುಮಾರ್, ‘ಸ್ಮಶಾನ ಅಭಿವೃದ್ಧಿ ಮಾಡದೆ ಇರುವುದರಿಂದ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗಿದ್ದನ್ನು ಮನಗಂಡು ಥಾಣೆ, ಮಂಗಳೂರಿನಿಂದ ಆರು ಅಂತ್ಯಸಂಸ್ಕಾರ ಘಟಕವನ್ನು ತರಿಸಿ ಅಳವಡಿಸಲಾಗಿದೆ. ಇದರಿಂದಾಗಿ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುವುದಿಲ್ಲ’ ಎಂದರು.

ಪಾಲಿಕೆ ಸದಸ್ಯ ಲಕ್ಷ್ಮಿನರಸಿಂಹರಾಜು, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಚಂದ್ರಶೇಖರ್, ಮುಖಂಡರಾದ ಪ್ರಸನ್ನ, ರಮೇಶ್ ಬಾಬು, ಚಂದ್ರಮೌಳಿ, ರಂಗನಾಥ್, ಹರೀಶ್, ಪರಮೇಶ್, ರವಿಶಂಕರ್, ಸಿದ್ಧಲಿಂಗಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.