ತುಮಕೂರು: ಕೋವಿಡ್–19ನಿಂದಾಗಿ ಕಾಲೇಜು ನಡೆಸಬಾರದು ಎಂದು ಹೇಳಲಾಗಿದೆ. ಆದರೆ ಓದಬಾರದು ಎಂದು ಹೇಳಿಲ್ಲ. ಸಂಕಷ್ಟದ ಸಮಯದಲ್ಲೂ ಅಭ್ಯಾಸ ಬಿಡಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಲಹೆ ಮಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ಲೆಟ್ ಪಿಸಿ ವಿತರಿಸಿ, ಸ್ಮಾರ್ಟ್ ತರಗತಿ ಕೊಠಡಿ ಉದ್ಘಾಟಿಸಿ ಮಾತನಾಡಿದರು.
ಶ್ರಮದ ಪರಿಚಯವಿದ್ದವರು ಸಾಧನೆಯ ಮೈಲುಗಲ್ಲಾಗಿ ನಿಲ್ಲಬಹುದು. ಹೆಚ್ಚು ಅಭ್ಯಾಸ ಮಾಡಿ, ಶ್ರಮಪಟ್ಟರೆ ಸ್ವರ್ಧೆಯಲ್ಲಿ ಗೆಲ್ಲಬಹುದು. ಆಗ ಹಿಂದಿನ ಸೋಲು, ಅವಮಾನಗಳನ್ನು ಮೆಟ್ಟಿ ನಿಲ್ಲಬಹುದು ಎಂದು ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಹೊಸತನ ಹುಡುಕುವ ತವಕ ರೂಢಿಸಿಕೊಳ್ಳಬೇಕು. ಇರುವ ಜ್ಞಾನದ ಜತೆಗೆ ಮತ್ತಷ್ಟು ಸೇರಿಸಿಕೊಳ್ಳಬೇಕು. ವಿಶ್ಲೇಷಣೆ ಮಾಡುವುದನ್ನು ಬೆಳೆಸಿಕೊಳ್ಳಬೇಕು. ಒಂದೇ ಪುಸ್ತಕ, ಒಂದೇ ವಿಚಾರ ತಿಳಿದುಕೊಳ್ಳುವ ಬದಲು, ಬೇರೆ ಬೇರೆ ಮೂಲಗಳಿಂದ ಅಭ್ಯಾಸ ಮಾಡಿದರೆ ಜ್ಞಾನದ ನೈಜ ಅರಿವು ಬೆಳೆಯುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದ್ದು, ಅದಕ್ಕೆ ಪೂರಕವಾದ ಜ್ಞಾನ ವೃದ್ಧಿಸಿಕೊಳ್ಳಬೇಕು. ಇಲ್ಲದಿದ್ದರೆ ಹಿಂದುಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಎಸ್.ಜಗದೀಶ್, ‘ಜಿಲ್ಲೆಯಲ್ಲಿ ಒಟ್ಟು 5,927 ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ನೀಡಲಾಗುತ್ತಿದೆ. ಇದರಿಂದ ಉನ್ನತ ಶಿಕ್ಷಣದ ಬೋಧನೆ ಮತ್ತು ಕಲಿಕೆಯಲ್ಲಿಕ್ರಾಂತಿಕಾರಕ ಬದಲಾವಣೆಗೆ ನಾಂದಿಯಾಗಲಿದೆ’ ಎಂದು ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಟ್ಯಾಬ್ಲೆಟ್ಅನ್ನು ಕಾಲಹರಣ ಮಾಡುವುದಕ್ಕೆ ದುರುಪಯೋಗ ಪಡಿಸಿಕೊಳ್ಳಬಾರದು. ದಾರಿ ತಪ್ಪಿಸುವ ಸಾಧನವಾಗಬಾರದು. ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಬಳಸಿಕೊಳ್ಳಬೇಕು’ ಎಂದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ವಿದ್ಯಾಕುಮಾರಿ, ಎಸ್ಪಿ ರಾಹುಲ್ ಕುಮಾರ್ ಶಹಾಪುರವಾಡ್, ಮಹಾನಗರ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪ್ರಾಂಶುಪಾಲರಾದ ಬಿ.ಆರ್.ಲೀಲಾವತಿ, ಪ್ರೊ.ಜಿ.ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.