ADVERTISEMENT

ತುಮಕೂರು: ಸಾವಿನ ಸಂಖ್ಯೆ ಏರುತ್ತಲೇ ಇದೆ

221ಕ್ಕೇರಿದ ಸೋಂಕಿತರ ಸಂಖ್ಯೆ; ಶನಿವಾರ ಮತ್ತೆ 13 ಮಂದಿಗೆ ದೃಢ

​ಪ್ರಜಾವಾಣಿ ವಾರ್ತೆ
Published 4 ಜುಲೈ 2020, 14:53 IST
Last Updated 4 ಜುಲೈ 2020, 14:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತುಮಕೂರು: ಕೊರೊನಾ ಸೋಂಕಿನಿಂದ ಶುಕ್ರವಾರ ರಾತ್ರಿ ತುಮಕೂರಿನ ಮರಳೂರು ದಿಣ್ಣೆಯಲ್ಲಿ 50 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದು ಈ ಮೂಲಕ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 8ಕ್ಕೇರಿದೆ. ಅಲ್ಲದೆ ಶನಿವಾರ ಒಂದೇ ದಿನ 13 ಮಂದಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ 221ಕ್ಕೇರಿದೆ.

ತುಮಕೂರು ನಗರದಲ್ಲಿಯೇ ಸಾವಿನ ‍ಪ್ರಕರಣಗಳು ಹೆಚ್ಚುತ್ತಿವೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಅಲ್ಲಿ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿದ್ದು ಅವರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸೋಂಕು ತಗುಲಿರುವುದು ದೃಢವಾಗಿತ್ತು.

ತುಮಕೂರಿನ ಸದಾಶಿವನಗರದ 38 ವರ್ಷದ ಪುರುಷ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಇವರು ಮೈಸೂರಿಗೂ ಹೋಗಿ ಬಂದಿದ್ದರು. ಇವರಿಗೆ ಸೋಂಕು ದೃಢವಾಗಿದೆ. ಪ್ರಾಥಮಿಕ ಸಂಪರ್ಕದಲ್ಲಿರುವ 10 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.

ADVERTISEMENT

ನಗರದ ಸರಸ್ವತಿಪುರಂನ ಏಳು ವರ್ಷದ ಹೆಣ್ಣು ಮಗುವಿಗೂ ಕೊರೊನಾ ಸೋಂಕು ತಗುಲಿದೆ. ಇವರ ಮೈಸೂರಿನ ಸಂಬಂಧಿಕರೊಬ್ಬರಲ್ಲಿ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಾಂತಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಬಾಲಕಿಯ ಕಫದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಾಲಕಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ಕು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಇವರ ಸಂಬಂಧಿ 50 ವರ್ಷದ ಮಹಿಳೆಗೂ ಸೋಂಕು ದೃಢವಾಗಿದೆ.

ಬಟವಾಡೆಯ ಮಂಜುನಾಥ ನಗರದ 49 ವರ್ಷದ ಪುರುಷ, ಮಾರುತಿನಗರದ 47 ವರ್ಷದ ಪುರುಷನಲ್ಲಿ ಸೋಂಕು ಕಂಡು ಬಂದಿದೆ. ಸೋಂಕಿನ ಪ್ರಕರಣಗಳು ಜಿಲ್ಲೆಯಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆ ದಟ್ಟವಾಗಿದೆ.

ಲ್ಯಾಬ್ ಮತ್ತೆ ಆರಂಭ

ಗಂಟಲು ಸ್ರಾವ ಮತ್ತು ಕಫದ ಮಾದರಿಗಳ ಪರೀಕ್ಷೆಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆರಂಭವಾಗಿರುವ ಲ್ಯಾಬ್ ಶನಿವಾರದಿಂದ ಮತ್ತೆ ಕಾರ್ಯಾರಂಭ ಮಾಡಿದೆ. ಪರೀಕ್ಷಾ ಕೇಂದ್ರದಲ್ಲಿ ಒಂದು ಯಂತ್ರ ದುರಸ್ತಿಗೆ ಬಂದ ಕಾರಣ ಇಲ್ಲಿ ಪರೀಕ್ಷೆಗಳು ತಾತ್ಕಾಲಿಕವಾಗಿ ನಡೆಯುತ್ತಿರಲಿಲ್ಲ. ಬೆಂಗಳೂರಿಗೆ ಮಾದರಿಗಳನ್ನು ಕಳುಹಿಸಲಾಗುತ್ತಿತ್ತು. ಶನಿವಾರದಿಂದ ಮತ್ತೆ ಈ ಲ್ಯಾಬ್‌ನಲ್ಲಿ ಪರೀಕ್ಷೆಗಳು ನಡೆಯುತ್ತಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

ಹಳ್ಳಿಗಳತ್ತ ಸಾಲು

ಬೆಂಗಳೂರಿನಲ್ಲಿ ಕೊರೊನಾ ಸೋಂಕು ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಜನರು ರಾಜಧಾನಿ ತೊರೆದು ಸ್ವಗ್ರಾಮಗಳತ್ತ ಮುಖಮಾಡಿದ್ದಾರೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 206, 04, 75ರಲ್ಲಿ ಬೈಕ್‌ಗಳು, ಕಾರುಗಳ ಸಂಖ್ಯೆ ತೀವ್ರವಾಗಿ ಹೆಚ್ಚಿದೆ. ಇದರಿಂದ ಹೆದ್ದಾರಿಯಲ್ಲಿ ಶನಿವಾರ ಹೆಚ್ಚಿನ ದಟ್ಟಣೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.