ADVERTISEMENT

ತುಮಕೂರಿನಲ್ಲಿ ಹೆಚ್ಚಳ ಮುಂದುವರಿಕೆ

ಗುರುವಾರ ಮತ್ತೆ 15 ಮಂದಿಗೆ ಸೋಂಕು; 18ಕ್ಕೇರಿದ ಸಾವಿನ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 16:50 IST
Last Updated 16 ಜುಲೈ 2020, 16:50 IST

ತುಮಕೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 600ರ ಗಡಿ ದಾಟಿದೆ. ಗುರುವಾರ ಮತ್ತೆ 15 ಮಂದಿಗೆ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 612ಕ್ಕೆ ಮುಟ್ಟಿದ್ದು, ಬುಧವಾರ ಮತ್ತೊಬ್ಬರು ಮೃತಪಟ್ಟಿದ್ದು ಸಾವಿನ ಸಂಖ್ಯೆ 18ಕ್ಕೆ ಏರಿಕೆಯಾಗಿದೆ.

ಗುಬ್ಬಿ ತಾಲ್ಲೂಕಿನ ಯಲಚಿಹಳ್ಳಿಯ 72 ವರ್ಷದ ವ್ಯಕ್ತಿ ಬುಧವಾರ ಕೊರೊನಾದಿಂದ ಮೃತಪಟ್ಟಿದ್ದಾರೆ. ಇವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜು.14ರಂದು ಇವರ ಗಂಟಲು ಸ್ರಾವ ಮಾದರಿ ಪಡೆಯಲಾಗಿತ್ತು. ಈ ನಡುವೆ ಗುಬ್ಬಿಗೆ ಇವರು ಮರಳಿದ್ದರು.

ತುಮಕೂರು ನಗರದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಗುರುವಾರವೂ 12 ಮಂದಿಗೆ ಸೋಂಕು ದೃಢವಾಗಿದೆ. ಹೀಗೆ ಪ್ರತಿ ದಿನವೂ ಜಿಲ್ಲೆಯಲ್ಲಿ ವರದಿಯಾಗುತ್ತಿರುವ ಸೋಂಕಿತರಲ್ಲಿ ತುಮಕೂರು ನಗರದಲ್ಲಿಯೇ ಹೆಚ್ಚು ಮಂದಿ ಇದ್ದಾರೆ ಎಂಬುದು ವಿಶೇಷ.

ADVERTISEMENT

ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐದು ಮಂದಿ ಗುರುವಾರ ಗುಣಮುಖರಾಗಿ ಬಿಡುಗಡೆಯಾದರು. ಇಲ್ಲಿಯವರೆಗೂ ಕೊರೊನಾ ಸೋಂಕಿತ 222 ಮಂದಿ ಗುಣಮುಖರಾಗಿದ್ದಾರೆ. 372 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿ ಇವೆ.

ತುಮಕೂರಿನಲ್ಲಿ ಎಲ್ಲೆಲ್ಲೆ ಸೋಂಕಿತರು: ನಗರದ ಎಸ್‌ಐಟಿ, ಮಹಾಲಕ್ಷ್ಮಿನಗರ, ವಿನಾಯಕನಗರ, ಮಾರುತಿನಗರ, ಶ್ರೀನಗರ, ಪಿ.ಎಚ್‌.ಕಾಲೊನಿ, ತುಮಕೂರು ತಾಲ್ಲೂಕಿನ ಕಲ್ಕೆರೆ, ಮಲ್ಲಸಂದ್ರದಲ್ಲಿ ಗುರುವಾರ ಸೋಂಕಿತರು ಇದ್ದಾರೆ. ದಿನದಿಂದ ದಿನಕ್ಕೆ ನಗರದ ಬೇರೆ ಬೇರೆ ಭಾಗಗಳಲ್ಲಿ ಸೋಂಕಿನ ಪ್ರಕರಣಗಳು ಕಂಡು ಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.