ADVERTISEMENT

ತುಮಕೂರು, ಬಳ್ಳಾರಿಯಲ್ಲಿ ಸಿಪಿಐ ಸ್ಪರ್ಧೆ: ಸಾತಿ ಸುಂದರೇಶ್‌

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 4:49 IST
Last Updated 20 ಫೆಬ್ರುವರಿ 2024, 4:49 IST
ಸಾತಿ ಸುಂದರೇಶ್
ಸಾತಿ ಸುಂದರೇಶ್   

ತುಮಕೂರು: ‘ತುಮಕೂರು ಮತ್ತು ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಸಿಪಿಐ ಸ್ಪರ್ಧಿಸಲಿದೆ’ ಎಂದು ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್‌ ಹೇಳಿದರು.

‘ರಾಜ್ಯದ ಮುಖಂಡರ ಅಭಿಪ್ರಾಯ ಆಲಿಸಿ, ರಾಜ್ಯದಲ್ಲಿ ಸ್ಪರ್ಧೆ ಮಾಡಬಹುದಾದ 2 ಕ್ಷೇತ್ರಗಳನ್ನು ಗುರುತಿಸಿ ಕೇಂದ್ರ ಸಮಿತಿಗೆ ವರದಿ ನೀಡಲಾಗಿದೆ’ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೊಟ್ಟ ಭರವಸೆ ಈಡೇರಿಸದೆ ಭಾವನಾತ್ಮಕವಾಗಿ ಜನರ ದಾರಿ ತಪ್ಪಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಮಾರ್ಚ್ 3ರಿಂದ ಆಂದೋಲನ ಹಮ್ಮಿಕೊಳ್ಳಲಾಗುವುದು. ‘ಬಿಜೆಪಿ ಸೋಲಿಸಿ, ದೇಶ ಉಳಿಸಿ’ ಎಂಬ ಆಂದೋಲನವು ದಾವಣಗೆರೆಯಲ್ಲಿ ಆರಂಭವಾಗಲಿದೆ. ಮೈಸೂರು, ಕಲಬುರಗಿ, ಬಳ್ಳಾರಿ, ಮಂಗಳೂರು, ಹಾವೇರಿಯಲ್ಲಿ ಕಾರ್ಮಿಕರು, ರೈತರ ಸಮಾವೇಶ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಸಿಪಿಐ ರಾಷ್ಟ್ರೀಯ ಮಂಡಳಿ ಕಾರ್ಯದರ್ಶಿ ಪಿ.ವಿ.ಲೋಕೇಶ್‌, ‘ಚುನಾವಣೆ ಬಾಂಡ್‌ ಎಂತಹ ಭ್ರಷ್ಟಾಚಾರ ಎಂಬುದನ್ನು ಸುಪ್ರಿಂಕೋರ್ಟ್‌ನ ಇತ್ತೀಚೆಗಿನ ತೀರ್ಪು ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗವು ನಿಗದಿತ ಅವಧಿಯೊಳಗೆ ಚುನಾವಣಾ ಬಾಂಡ್‍ಗಳ ಬಗ್ಗೆ ತನ್ನ ವೆಬ್‍ಸೈಟ್‍ನಲ್ಲಿ ಮಾಹಿತಿ ಹಂಚಿಕೊಳ್ಳಬೇಕು. ಇದರಿಂದ ನಿಜವಾದ ಭ್ರಷ್ಟರು ಯಾರು? ದೇಶದ ಸಂಪತ್ತು ಯಾರ ಕೈಸೇರುತ್ತಿದೆ ಎಂಬುವುದು ಜನರಿಗೆ ತಿಳಿಯಲಿದೆ’ ಎಂದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಗಿರೀಶ, ರಾಜ್ಯ ಸಹ ಕಾರ್ಯದರ್ಶಿ ಬಿ.ಅಮ್ಜದ್‌, ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯೆ ಎ.ಜ್ಯೋತಿ, ಖಜಾಂಚಿ ಅಶ್ವತ್ಥನಾರಾಯಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.