ತುಮಕೂರು: ಕಾಂತರಾಜ ಸಮಿತಿ ಸಲ್ಲಿಸಿರುವ ಜಾತಿ ಜನ ಗಣತಿ (ಆರ್ಥಿಕ, ಸಾಮಾಜಿಕ ಗಣತಿ) ವರದಿ ಬಹಿರಂಗ ಪಡಿಸುವಂತೆ ಸಿಪಿಎಂ ಆಗ್ರಹಿಸಿದೆ.
ಆಯೋಗ ವರದಿ ಸಲ್ಲಿಸಿ ವರ್ಷಗಳೇ ಕಳೆದಿದ್ದರೂ ಸರ್ಕಾರ ಅದನ್ನು ಅಂಗೀಕರಿಸಿಲ್ಲ. ಸಾರ್ವಜನಿಕ ಚರ್ಚೆಗೂ ಬಿಡುಗಡೆ ಮಾಡಿಲ್ಲ. ಇದು ಜನ ವಿರೋಧಿ ನಿಲುವಾಗಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ನಗರ ಕಾರ್ಯದರ್ಶಿ ಎ.ಲೋಕೇಶ್ ಆರೋಪಿಸಿದ್ದಾರೆ.
ಸವೀಕ್ಷೆ ವರದಿ ಅಧಿಕೃತವಾಗಿ ಬಿಡುಗಡೆ ಆಗಿದ್ದರೂ ಕೆಲವರು ವರದಿ ದೋಷಪೂರಿತವಾಗಿದೆ, ವೈಜ್ಞಾನಿಕವಾಗಿ ಸಮೀಕ್ಷೆ ಮಾಡಿಲ್ಲ ಎಂದು ವಿರೋಧಿಸುವುದು ಸರಿಯಲ್ಲ. ವರದಿ ಬಿಡುಗಡೆ ಪರ– ವಿರೋಧ ಬೇಡಿಕೆಗಳು ಒಂದೊಂದು ಜಾತಿಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ರೂಪುಗೊಳ್ಳುತ್ತಿರುವುದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ಹೇಳಿದ್ದಾರೆ.
ಸರ್ಕಾರವೇ ಆಯೋಗ ರಚಿಸಿ ಸುಮಾರು ₹164 ಕೋಟಿ ಖರ್ಚು ಮಾಡಿ ವರದಿ ಸಿದ್ಧಪಡಿಸಿದೆ. ಅದನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟು, ಅಂತಿಮವಾಗಿ ಒಂದು ನಿರ್ಧಾರ ಕೈಗೊಳ್ಳಬೇಕು. ವರದಿಯನ್ನು ಮುಂದಿಟ್ಟುಕೊಂಡು ಸಮಾಜದಲ್ಲಿ ಒಡಕು ಉಂಟು ಮಾಡುವ ಪ್ರಯತ್ನಗಳಿಗೆ ಸರ್ಕಾರವೇ ಕುಮ್ಮಕ್ಕು ಕೊಡಬಾರದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.