ADVERTISEMENT

ಹಳ್ಳಿಗಳಲ್ಲಿ ಟಾಸ್ಕ್‌ಪೋರ್ಸ್ ರಚಿಸಿ

ಜಿಲ್ಲೆಯ ಕೋವಿಡ್ ಸ್ಥಿತಿಗತಿ ಪರಿಶೀಲಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 16:55 IST
Last Updated 19 ಸೆಪ್ಟೆಂಬರ್ 2020, 16:55 IST

ತುಮಕೂರು: ಪ್ರತಿ ಹಳ್ಳಿ‌ಯಲ್ಲಿ ಒಂದು ಟಾಸ್ಕ್‌ ಪೋರ್ಸ್ ರಚಿಸಿ ಕೊರೊನಾ ಬಗ್ಗೆ ಜನ ಜಾಗೃತಿ ಮೂಡಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಅಧಿಕಾರಿಗಳಿಗೆ ಸೂಚಿಸಿದರು.

ಕೋವಿಡ್ ಸ್ಥಿತಿಗತಿ ಪರಿಶೀಲಿಸಿದ ಅವರು ಈ ಸೂಚನೆ ನೀಡಿದರು.

ಜಿಲ್ಲೆಯ 340 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ಹಳ್ಳಿಯಲ್ಲೂ ಸಮಿತಿ ರಚಿಸಬೇಕು. ಈ ತಂಡ ಹದಿನೈದು ದಿನಕ್ಕೆ ಒಮ್ಮೆ ಕಡ್ಡಾಯವಾಗಿ ಮನೆ ಮನೆಗೆ ತೆರಳಿ ಕೊರೊನಾ ಮುನ್ನೆಚ್ಚರಿಕೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ADVERTISEMENT

ಜಿಲ್ಲೆಯಲ್ಲಿ ಮರಣ ಪ್ರಮಾಣ ಶೇ 2.1ರಷ್ಟಿದೆ ಎಂಬ ಅಧಿಕಾರಿಗಳ ಮಾಹಿತಿಗೆ ಬೇಸರಗೊಂಡ‌‌ ಸಚಿವರು, ಸಾವಿನ ಪ್ರಮಾಣ ಕಡಿಮೆ‌ ಮಾಡುವ ನಿಟ್ಟಿನಲ್ಲಿ‌ ಏನೆಲ್ಲಾ ಕ್ರಮ ಕೈಗೊಂಡಿದ್ದೀರಿ? ಎಲ್ಲ ಸಾವನ್ನೂ ಕೊರೊನಾ ಎಂದೇ ವರದಿ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ವಾರಕ್ಕೆ ಒಮ್ಮೆ ಸಾವಿನ ಲೆಕ್ಕಾಚಾರ (ಡೆತ್‌ ಆಡಿಟ್) ಮಾಡುವ ಬದಲು, ಪ್ರತಿ ದಿನ ಸಾವಿನ ಮಾಹಿತಿಯ ಲೆಕ್ಕಾಚಾರ ಆಗಲೇಬೇಕು‌. ನಂತರ ಆ ವರದಿ ಸಲ್ಲಿಸಿ ಎಂದು ನಿರ್ದೇಶನ ನೀಡಿದರು.

ಪ್ರತಿ ಜಿಲ್ಲೆಗಳಿಂದ ಬೇಡಿಕೆ ಬಂದ ಕಾರಣ ಹಿರಿಯ ಸ್ಥಾನಿಕ ವೈದ್ಯರನ್ನು ನೇಮಿಸಿದ್ದೇವೆ. ಆದರೆ, ತುಮಕೂರಿನಿಂದ ಈ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿಯೇ ಬಂದಿಲ್ಲ. ಹೀಗಿರುವಾಗ ನೇಮಿಸಲು ಹೇಗೆ ಸಾಧ್ಯ? ತಕ್ಷಣ ವರದಿ ನೀಡಿದರೆ ಹುದ್ದೆ ನಿರೀಕ್ಷೆಯಲ್ಲಿ ಇರುವ ವೈದ್ಯರನ್ನು‌ ನೇಮಿಸಲಾಗುವುದು ಎಂದು ಭರವಸೆ ನೀಡಿದರು. ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಹೈಫ್ಲೋ ಆಕ್ಸಿಜನ್‌ ಸೌಲಭ್ಯವುಳ್ಳ ಕನಿಷ್ಠ 100 ಬೆಡ್‌ಗಳನ್ನು ಕಡ್ಡಾಯವಾಗಿ ರೋಗಿಗಳಿಗೆ ಒದಗಿಸಲು ಕ್ರಮಕೈಗೊಳ್ಳುವಂತೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.