ADVERTISEMENT

ದೇಗುಲಗಳಲ್ಲಿ ಕಳ್ಳತನ; ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 13:40 IST
Last Updated 18 ಸೆಪ್ಟೆಂಬರ್ 2019, 13:40 IST
ಆರೋಪಿಯಿಂದ ವಶಪಡಿಸಿಕೊಂಡ ಮಾಲುಗಳೊಂದಿಗೆ ಎಸ್‌ಪಿ ವಂಶಿಕೃಷ್ಣ, ಡಿವೈಎಸ್‌ಪಿ ತಿಪ್ಪೇಸ್ವಾಮಿ, ಸಿಪಿಐ ಮಧುಸೂದನ್ ಹಾಗೂ ಸಿಬ್ಬಂದಿ. ಒಳಚಿತ್ರದಲ್ಲಿ ಆರೋಪಿ ಸೈಯದ್ ಇಂತಿಯಾಜ್ ಪಾಷಾ.
ಆರೋಪಿಯಿಂದ ವಶಪಡಿಸಿಕೊಂಡ ಮಾಲುಗಳೊಂದಿಗೆ ಎಸ್‌ಪಿ ವಂಶಿಕೃಷ್ಣ, ಡಿವೈಎಸ್‌ಪಿ ತಿಪ್ಪೇಸ್ವಾಮಿ, ಸಿಪಿಐ ಮಧುಸೂದನ್ ಹಾಗೂ ಸಿಬ್ಬಂದಿ. ಒಳಚಿತ್ರದಲ್ಲಿ ಆರೋಪಿ ಸೈಯದ್ ಇಂತಿಯಾಜ್ ಪಾಷಾ.   

ತುಮಕೂರು: ತಾಲ್ಲೂಕಿನ ಕಸಬಾ ಹೋಬಳಿ ಊರುಕೆರೆ ಭೋವಿಪಾಳ್ಯದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ತುಮಕೂರು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳ್ಳಾವಿಯ ಸೈಯದ್ ಇಂತಿಯಾಜ್ ಪಾಷಾ ಬಂಧಿತ. ಆಂಜನೇಯಸ್ವಾಮಿ ದೇವಾಲಯದ ಬೀಗ ಮುರಿದು 20 ಸಾಲಿಗ್ರಾಮಗಳು, 35 ಬೆಳ್ಳಿ ಮತ್ತು ತಾಮ್ರದ ದೇವರ ಪ್ರತಿಮೆಗಳು, 2 ಬೆಳ್ಳಿ ತಾಲಿಗಳು, 2 ಬೆಳ್ಳಿ ಲೋಟಗಳು, 2 ಬೆಳ್ಳಿ ಬಟ್ಟಲುಗಳು, 1 ತಾಮ್ರದ ಬಿಂದಿಗೆ, 1 ತಾಮ್ರದ ಗಂಗಳ, 5 ತಾಮ್ರದ ತಂಬಿಗೆಗಳನ್ನು ಕಳ್ಳತನ ಮಾಡಲಾಗಿತ್ತು.

ಈ ಸಂಬಂಧ ದೇವಸ್ಥಾನದ ರಮೇಶ್ ಎಂಬುವವರು ದೂರು ನೀಡಿದ್ದರು. ಗ್ರಾಮಾಂತರ ಸಿಪಿಐ ಮಧುಸೂಧನ್ ನೇತೃತ್ವದಲ್ಲಿ ತನಿಖೆಗೆ ತಂಡ ರಚಿಸಲಾಗಿತ್ತು.

ADVERTISEMENT

ಬೆಳ್ಳಾವಿ ಹೋಬಳಿ ಕೊಟ್ಟನಹಳ್ಳಿ ಪಾಳ್ಯ ಅಭಯಾಂಜನೇಯಸ್ವಾಮಿ ದೇವಸ್ಥಾನ, ಊರುಕೆರೆ ಬಾಲಾಜಿ ನಗರದ ಕೆ.ಆರ್.ವನಿತಾ ಅವರ ಮನೆಯಲ್ಲಿ ಕಳ್ಳತನ, ಊರುಕೆರೆಯ ಪಂಚಾಕ್ಷರಯ್ಯ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದಾನೆ. ಅಗಳಕುಂಟೆ ಆಂಜನೇಯ ಸ್ವಾಮಿ ದೇವಸ್ಥಾನ, ಹಿರೇತೊಟ್ಲಕೆರೆ ಸೋಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿಯೂ ಈತ ಭಾಗಿಯಾಗಿದ್ದಾನೆ. ಬಂಧಿತನಿಂದ ₹ 3.70 ಲಕ್ಷ ಬೆಲೆ ಬಾಳುವಂತಹ ಚಿನ್ನ, ಬೆಳ್ಳಿ ಹಾಗೂ ದೇವಸ್ಥಾನದಲ್ಲಿ ಉಪಯೋಗಿಸುವಂತಹ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.

ಕಾರ್ಯಾಚರಣೆಯಲ್ಲಿ ಸಿಪಿಐ ಮಧುಸೂಧನ್, ಪಿಎಸ್ಐ ಎಂ.ಬಿ.ಲಕ್ಷ್ಮಯ್ಯ, ಸಿಬ್ಬಂದಿ ಉಮೇಶ್, ಶಾಂತಕುಮಾರ್, ತುಮಕೂರು ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು, ತಿಮ್ಮರಾಜು, ಪ್ರಸನ್ನಕುಮಾರ್, ಪ್ರಾಣೇಶ್ , ಜಿ.ಪ್ರಭು, ಓಂಕಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.