ADVERTISEMENT

ರಾಬರಿ ಘಟನೆ ಸೃಷ್ಟಿಸಿ ಸಿಕ್ಕಿಬಿದ್ದ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 16:03 IST
Last Updated 21 ಜುಲೈ 2020, 16:03 IST
ಶಿರಾ ಠಾಣೆಯ ಪೊಲೀಸರು ವಶಪಡಿಸಿಕೊಂಡಿರುವ ಹಣ ಮತ್ತು ಆರೋಪಿಗಳು
ಶಿರಾ ಠಾಣೆಯ ಪೊಲೀಸರು ವಶಪಡಿಸಿಕೊಂಡಿರುವ ಹಣ ಮತ್ತು ಆರೋಪಿಗಳು   

ತುಮಕೂರು: ಬ್ಯಾಂಕ್‌ ಸಿಬ್ಬಂದಿಯೇ ರಾಬರಿಯಾದಂತೆ ಘಟನೆ ಸೃಷ್ಟಿಸಿ ರಿಕವರಿ ಹಣವನ್ನು ಲಪಟಾಯಿಸಲು ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ.

ಕೋಟೆಕ್ ಮಹೇಂದ್ರ ಬ್ಯಾಂಕಿನ ರಿಕವರಿ ಎಕ್ಸಿಕ್ಯುಟೀವ್ ಸಿ.ನಟರಾಜು ಜುಲೈ 15 ರಂದು ಶಿರಾ ತಾಲ್ಲೂಕು ಚಿಕ್ಕದಾಸರಹಳ್ಳಿ ಠಾಣೆಗೆ ಬಂದು, ‘ತಾವು ಸಂಜೆ ಬ್ಯಾಂಕಿನ ರಿಕವರಿ ಬಾಬ್ತು ₹7,53,000 ಹಣವನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಂಡು ಮೋಟಾರ್ ಸೈಕಲ್‌ನಲ್ಲಿ ಯರಗುಂಟೆ ಗೇಟ್‌ನಿಂದ ಶಿರಾ ಕಡೆಗೆ ಬರುತ್ತಿರುವಾಗ, ಉಲ್ಲಾಸ್ ತೋಪಿನ ಬಳಿ ಯಾರೋ ಇಬ್ಬರು ಅಪರಿಚಿತರು ಕಣ್ಣಿಗೆ ಖಾರದ ಪುಡಿ ಎರಚಿ, ಕಬ್ಬಿಣದ ಚೈನ್‌ನಿಂದ ಒಡೆದು ಹಣವನ್ನು ಕಿತ್ತುಕೊಂಡು ಹೋಗಿದ್ದಾರೆ’ ಎಂದು ದೂರು ಸಲ್ಲಿಸಿದ್ದರು.

ಘಟನೆಗೆ ಸಂಬಂಧಿಸಿದಂತೆ ಶಿರಾ ಠಾಣೆಯ ಇನ್‌ಸ್ಪೆಕ್ಟರ್‌ ಪಿ.ಬಿ.ಹನುಮಂತಪ್ಪ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡವು ಬ್ಯಾಂಕಿನ ಗ್ರಾಹಕ ಚಿದಾನಂದ ಮತ್ತು ಆರೋಪಿಗಳಾದ ಸಿ.ನಟರಾಜು ಹಾಗೂ ಸ್ನೇಹಿತ ಬಿ.ಎಚ್.ಅಶೋಕ ಅವರನ್ನು ವಿಚಾರಣೆ ಮಾಡಿದಾಗ ದೂರುದಾರನೇ ಸ್ನೇಹಿತನ ಜತೆಗೂಡಿ ಹಣ ಬಚ್ಚಿಟ್ಟು ರಾಬರಿಯಾದಂತೆ ಘಟನೆ ಸೃಷ್ಟಿಸಿರುವುದು ಗೊತ್ತಾಗಿದೆ.

ADVERTISEMENT

ಪೊಲೀಸರು ಆರೋಪಿಗಳು ಬಚ್ಚಿಟ್ಟಿದ್ದ ₹7,53,000 ಹಣವನ್ನು ಹಾಗೂ ಕೃತ್ಯಕ್ಕೆ ಬಳಸಿದ ಎರಡು ಮೋಟಾರ್ ಸೈಕಲ್, 3 ಮೊಬೈಲ್, ಒಂದು ಸೈಕಲ್ ಚೈನ್, ಹಾಗೂ ಖಾರದಪುಡಿಯ ಪ್ಲಾಸ್ಟಿಕ್ ಕವರ್ ಮತ್ತು ಬಾಕ್ಸ್‌ನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.

ಸಿ.ನಟರಾಜು ಶಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿ ಚಿಕ್ಕದಾಸರಹಳ್ಳಿ ನಿವಾಸಿಯಾಗಿದ್ದಾರೆ. ಆತನ ಸ್ನೇಹಿತ ಬಿ.ಎಚ್.ಅಶೋಕ ಕಳ್ಳಂಬೆಳ್ಳ ಹೋಬಳಿ ಭೂಪಸಂದ್ರದ ನಿವಾಸಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.