ಪಾವಗಡ: ತಾಲ್ಲೂಕಿನ ಬಹುತೇಕ ರಸ್ತೆಗಳು ಹಾಳಾಗಿದ್ದು, ಒಂದೆಡೆಯಿಂದ ಮತ್ತೊಂದೆಡೆ ಸಂಚರಿಸುವ ಜನರು ಹೈರಾಣುಗುತ್ತಿದ್ದಾರೆ.
ಸುತ್ತಲೂ ಆಂಧ್ರದ ಗಡಿ ಹಂಚಿಕೊಂಡಿರುವ ತಾಲ್ಲೂಕಿನ ಜನರಿಗೆ ಬೇರೆಡೆಗೆ ಹೋಗಲು ರಸ್ತೆ ಮಾರ್ಗವೆ ಆಧಾರ. ರಾಯದುರ್ಗ-ತುಮಕೂರು ರೈಲ್ವೆ ಮಾರ್ಗ ಕೇವಲ ಭಾಷಣ, ಭರವಸೆಗಳಲ್ಲಷ್ಟೇ ವೇಗ ಪಡೆದುಕೊಂಡಿದೆ. ವಾಸ್ತವವಾಗಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ.
ಅಭಿವೃದ್ಧಿಯ ದ್ಯೋತಕ ಎನಿಸಿಕೊಂಡಿರುವ ತಾಲ್ಲೂಕಿನ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಗುಂಡಿಗಳಿಂದ ತುಂಬಿಕೊಂಡಿರುವ ರಸ್ತೆಗಳು, ಬಿಸಿಲು ಬಂದರೆ ದೂಳು, ಮಳೆ ಬಂದರೆ ಕೆಸರಿನ ಗದ್ದೆಗಳಾಗಿ ಮಾರ್ಪಾಡುತ್ತವೆ.
ಹಾಳದ ರಸ್ತೆಗಳಿಂದ ಕುಟುಂಬಕ್ಕೆ ಆಸರೆಯಾಗಿದ್ದ ಅದೆಷ್ಟೊ ಜೀವಗಳು ಬಲಿಯಾಗಿವೆ. ಪ್ರತಿವರ್ಷ ನೂರಾರು ಮಂದಿ ಶಾಶ್ವತ ಅಂಗವಿಕಲರಾಗುತ್ತಿದ್ದಾರೆ.
ಡಾಂಬರ್ ಹಾಕಿದ ರಸ್ತೆಗಳಲ್ಲಿ ಕಾಮಗಾರಿ ನಡೆಸಿದ ಕೆಲವೇ ತಿಂಗಳುಗಳಲ್ಲಿ ಡಾಂಬರ್ ಕಿತ್ತು ಹೋಗಿ ಕಲ್ಲು ಕಾಣುತ್ತಿವೆ. ಅಲ್ಪ ಪ್ರಮಾಣದ ಮಳೆ ಬಿದ್ದರೂ ಗುಂಡಿಗಳು ನಿರ್ಮಾಣವಾಗುತ್ತಿವೆ. ವಾಹನಗಳು ಸಂಚರಿಸುವಾಗ ಕಲ್ಲುಗಳು ಹಿಂದೆ ಬರುವ ವಾಹನ ಸವಾರರಿಗೆ ತಾಗಿ ಗಾಯಗೊಂಡಿರುವ ಸಾಕಷ್ಟು ನಿದರ್ಶನಗಳಿವೆ.
ತುಮಕೂರು, ಬಳ್ಳಾರಿ ರಸ್ತೆಗೆ ಸಂಪರ್ಕ ಕಲ್ಪಿಸುವ ಕೆ– ಶಿಪ್ ರಸ್ತೆ ಸಂಚಾರಕ್ಕೆ ಯೋಗ್ಯವಾಗಿದೆಯಾದರೂ, ಈ ರಸ್ತೆಯೂ ಅಲ್ಲಲ್ಲಿ ಹಾಳಾಗಿದೆ. ಹೆಚ್ಚಿನ ಸಂಖ್ಯೆಯ ವಾಹನಗಳು ಓಡಾಡುವ ಪಾವಗಡ-ಚಳ್ಳಕೆರೆ ಮಾರ್ಗ ಸಂಪೂರ್ಣ ಹದಗೆಟ್ಟಿದೆ. ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ನರಕಯಾತನೆ ಅನುಭವಿಸುವ ಸ್ಥಿತಿ ಇದೆ. ಲಿಂಗದಹಳ್ಳಿ ಕಡೆಯಿಂದ ಪಟ್ಟಣಕ್ಕೆ ಬರಲು ಸಾರ್ವಜನಿಕರು ಸರ್ಕಸ್ ಮಾಡಬೇಕು. ಈ ಮಾರ್ಗದ ಬಸ್‌ಗಳಲ್ಲಿ ಪ್ರಯಾಣಿಸುವ ಜನತೆ ಇನ್ನಿಲ್ಲದ ಯಾತನೆ ಅನುಭವಿಸುತ್ತಿದ್ದಾರೆ.
ಅಡಿಕೆ, ಶೇಂಗಾ ಮಾರುಕಟ್ಟೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿವಿಧ ವಾಣಿಜ್ಯ, ಶೈಕ್ಷಣಿಕ ಉದ್ದೇಶಗಳಿಗಾಗಿ ತಾಲ್ಲೂಕಿನ ಜನತೆ ಚಳ್ಳಕೆರೆ, ಚಿತ್ರದುರ್ಗ, ದಾವಣಗೆರೆಗೆ ಹೋಗಿ ಬರುತ್ತಾರೆ. ಆದರೆ ರಸ್ತೆ ಹಾಳಾಗಿರುವ ಕಾರಣ ತೀವ್ರ ಸಮಸ್ಯೆ ಅನುಭವಿಸುವಂತಾಗಿದೆ.
ತಾಲ್ಲೂಕಿನ ಕೆ.ಟಿ.ಹಳ್ಳಿ, ಸಿ.ಕೆ.ಪುರ ಮೂಲಕ ಅರಸೀಕೆರೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅವ್ಯವಸ್ಥೆ ಹೇಳತೀರದು. ಮಂಗಳವಾಡ, ಅರಸೀಕೆರೆ, ತುಮಕುಂಟೆ ಗೇಟ್ ಸೇರಿದಂತೆ ವಿವಿಧೆಡೆ ಈ ಮಾರ್ಗದಲ್ಲಿ ಬೃಹತ್ ಗುಂಡಿಗಳು ನಿರ್ಮಾಣವಾಗಿದೆ.
ಪಟ್ಟಣದಿಂದ ವೆಂಕಟಾಪುರ, ದೊಮ್ಮತಮರಿ ಮೂಲಕ ಹಿಂದೂಪುರಕ್ಕೆ ಹೋಗುವ ಮಾರ್ಗ ಕಳೆದ ಎರಡು ವರ್ಷಗಳಿಂದ ಗುಂಡಿಗಳಿಂದ ತುಂಬಿದೆ. 2022ರಲ್ಲಿ ಮಳೆ ಬಿದ್ದಾಗ ಈ ಪ್ರದೇಶ ದ್ವೀಪದಂತಾಗಿತ್ತು. ಆಗ ಹದಗೆಟ್ಟ ರಸ್ತೆಗಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸಾರ್ವಜನಿಕರ ಮನವಿ ಪತ್ರಗಳು, ದೂರುಗಳು ಕಸದ ಬುಟ್ಟಿ ಸೇರಿವೆ.
ಹಿಂದೂಪುರಕ್ಕೆ ಹೋಗುವವರು ಆಂಧ್ರ ಮಡಕಶಿರಾಕ್ಕೆ ಹೋಗಿ ಅಲ್ಲಿಂದ ಹಿಂದೂಪುರಕ್ಕೆ ಹೋಗುತ್ತಾರೆ. ಆದರೆ ಗ್ರಾಮಗಳಿಗೆ ಹೋಗುವವರು, ಅಲ್ಲಿಂದ ಪಟ್ಟಣಕ್ಕೆ ಬರುವವರು ಅನಿವಾರ್ಯವಾಗಿ ಇದೇ ರಸ್ತೆಯಲ್ಲಿಯೇ ಸಂಚರಿಸಬೇಕಿದೆ.
ಮುಖ್ಯ ರಸ್ತೆಗಳ ಸ್ಥಿತಿಯೇ ಹೀಗಾದರೆ ತಾಲ್ಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಒಳ ರಸ್ತೆಗಳ ಸ್ಥಿತಿ ಬಣ್ಣಿಸಲಾಗದು. ತಾಲ್ಲೂಕಿನ ದವಡಬೆಟ್ಟ ಗ್ರಾಮದ ಬಳಿ ರಸ್ತೆ ಬಾವಿಗೆ ಕುಸಿದಿದೆ. ಈ ಗ್ರಾಮದ ಜನತೆ ಕಳೆದ ಎರಡು ವರ್ಷಗಳಿಂದ ಕೆರೆ ಕಟ್ಟೆ ಮೇಲಿಂದ ಅಪಾಯಕಾರಿ ಸ್ಥಿತಿಯಲ್ಲಿ ಓಡಾಡುತ್ತಿದ್ದಾರೆ.
ತಾಲ್ಲೂಕಿನ ಕಸಬಾ, ನಿಡಗಲ್, ನಾಗಲಮಡಿಕೆ, ವೈಎನ್ ಹೊಸಕೋಟೆ ಹೋಬಳಿಗಳ ಬಹುತೇಕ ಗ್ರಾಮಗಳಿಗೆ ಸುಸಜ್ಜಿತ ರಸ್ತೆ ಇಲ್ಲ. ಸಾವಿರಾರು ಕೋಟಿ ವೆಚ್ಚದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣವಾಗಿದ್ದು, ಸಿಎಸ್‌ಆರ್ ಅನುದಾನವೇ ನೂರಾರು ಕೋಟಿ ಇದೆ. ಆದರೂ ತಾಲ್ಲೂಕಿನ ಜನತೆ ಉತ್ತಮ ರಸ್ತೆ ಭಾಗ್ಯದಿಂದ ವಂಚಿತರಾಗಿದ್ದಾರೆ.
₹10 ಕೋಟಿ ವೆಚ್ಚದ ಐದು ರಸ್ತೆ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ. ₹20 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಸೋಲಾರ್ ಪಾರ್ಕ್ ವ್ಯಾಪ್ತಿಯಲ್ಲಿನ ಗ್ರಾಮಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲು ₹11 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.ಅನಿಲ್ ಕುಮಾರ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪಿಡಬ್ಲ್ಯೂಡಿ
ತಾಲ್ಲೂಕಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಆದ್ಯತೆ ಮೇರೆಗೆ ಹೆಚ್ಚಿನ ಅನುದಾನ ಮಂಜೂರು ಮಾಡಬೇಕು ಭಾಸ್ಕರ್ ಮುಗುದಾಳಬೆಟ್ಟ ತಾಲ್ಲೂಕಿನ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿವೆ. ಶಾಲೆ ಕಾಲೇಜು ಆಸ್ಪತ್ರೆ ಸೇರಿದಂತೆ ಪಟ್ಟಣಕ್ಕೆ ಬರುವವರಿಗೆ ವಿವಿಧೆಡೆಯಿಂದ ಗ್ರಾಮಗಳಿಗೆ ಬರುವ ಜನರಿಗೆ ಸಮಸ್ಯೆಯಾಗುತ್ತಿದೆ. ಕೂಡಲೇ ರಸ್ತೆ ದುರಸ್ತಿ ಮಾಡಬೇಕು.ಅನಂತಯ್ಯ ಮಾಜಿ ಸೈನಿಕ ಕೆ.ಟಿ. ಹಳ್ಳಿ
ದೊಮ್ಮತಮರಿಯಿಂದ ಮಡಕಶಿರಾಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದೆ. ಈ ಮಾರ್ಗದಲ್ಲಿ ಸಂಚರಿಸುವವರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಶೀಘ್ರ ರಸ್ತೆ ದುರಸ್ತಿ ಮಾಡಿ ಜನರ ಜೀವ ಕಾಪಾಡಬೇಕು ಬಾಬಾಜಾನ್ ಮುರಾರಾಯನಹಳ್ಳಿ ನಾಲ್ಕು ವರ್ಷದಿಂದ ತುಮಕುಂಟೆ ಗೇಟ್ ಬಳಿ ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿ ನಿರ್ಮಾಣವಾಗಿದೆ. ಅಧಿಕಾರಿಗಳಿಗೆ ರಸ್ತೆ ಸರಿಪಡಿಸುವಂತೆ ಮನವಿ ಮಾಡಲಾಗಿದೆ. ಸಾಕಷ್ಟು ಅಪಘಾತಗಳು ನಡೆದಿವೆ. ಮಳೆ ಬಂದರೆ ಓಡಾಡಲೂ ಸಾಧ್ಯವಾಗುವುದಿಲ್ಲ. ಮಂಗಳವಾಡದ ಕೆರೆ ಕೋಡಿ ನೀರು ಇದೇ ರಸ್ತೆಯ ಮೇಲೆ ಹೋಗುತ್ತದೆ. ಸೂಕ್ತ ಸೇತುವೆ ವ್ಯವಸ್ಥೆ ಇಲ್ಲದ ಕಾರಣ ರಸ್ತೆ ಹಾಳಾಗಿದೆ.ಮಂಜುನಾಥ್ ಅರಸೀಕೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.