ADVERTISEMENT

ತುಮಕೂರು | ಹಾಸ್ಟೆಲ್‌ನಲ್ಲಿ ಅಧಿಕಾರಿಗಳ ನೃತ್ಯ: ತನಿಖಾ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2024, 6:51 IST
Last Updated 24 ಜನವರಿ 2024, 6:51 IST

ತುಮಕೂರು: ತೀವ್ರ ವಿವಾದಕ್ಕೆ ಕಾರಣವಾಗಿದ್ದ ನಗರದ ಹೊರ ವಲಯದ ಗೆದ್ದಲಹಳ್ಳಿಯಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ವಿದ್ಯಾರ್ಥಿ ನಿಲಯದಲ್ಲಿ ಅಧಿಕಾರಿಗಳು ನೃತ್ಯ ಮಾಡಿದ್ದಾರೆ ಎನ್ನಲಾದ ಪ್ರಕರಣ ಕುರಿತು ತನಿಖೆ ನಡೆಸಲು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮುಂದಾಗಿದೆ.

ತನಿಖೆ ನಡೆಸಲು ಎಚ್.ಸಿ.ರಾಘವೇಂದ್ರ, ಅಂಜಲಿ ರಾಮಣ್ಣ, ಸಿ.ವಿ.ತಿರುಮಲ ರಾವ್ ಅವರನ್ನು ಒಳಗೊಂಡ ಮೂವರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿದ್ದು, ಫೆ. 1ರಂದು ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳ ಕಚೇರಿಯಲ್ಲಿ ತನಿಖೆಗೆ ಸಮಯ ನಿಗದಿಪಡಿಸಲಾಗಿದೆ.

ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಹಾಸ್ಟೆಲ್‌ನಲ್ಲಿ ದೀಪಾವಳಿ ಆಚರಣೆ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹಿಂದಿನ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ತಹಶೀಲ್ದಾರ್ ಸಿದ್ದೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಸಂರ್ಭದಲ್ಲಿ ಕೆಲವು ಅಧಿಕಾರಿಗಳು ಬಾಲಕಿಯರ ಜತೆಗೆ ನೃತ್ಯ ಮಾಡಿ, ವಿದ್ಯಾರ್ಥಿನಿಯರ ಜತೆ ಸಭ್ಯತೆ ಮೀರಿ ನಡೆದುಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಧಿಕಾರಿಗಳು ನೃತ್ಯ ಮಾಡಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡಿದ್ದವು.

ADVERTISEMENT

ವಿಡಿಯೋ ಹರಿದಾಡಿದ ನಂತರ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದವು. ಸಾಮಾಜಿಕ ಜಾಲ ತಾಣದಲ್ಲಿ ಪರ–ವಿರೋಧ ಚರ್ಚೆಗಳು ನಡೆದಿದ್ದವು. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಪ್ರಕರಣ ದಾಖಲಾಗಿರಲಿಲ್ಲ. ಹೋರಾಟಗಾರರ ವಿರುದ್ಧವೇ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಎಂ.ದಿನೇಶ್ ಅವರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಭೂಮಿ ಮತ್ತು ವಸತಿ ಹೋರಾಟ ಸಮಿತಿ ಸಂಚಾಲಕ ಹಂದ್ರಾಳ್‌ ನಾಗಭೂಷಣ್‌ ವಿರುದ್ಧ ಪ್ರಕರಣ ದಾಖಲಾಗಿತ್ತು. ‘ಹಾಸ್ಟೆಲ್‌ ವಿದ್ಯಾರ್ಥಿನಿಯರ ಆತ್ಮ ಗೌರವಕ್ಕೆ ಧಕ್ಕೆ ಉಂಟು ಮಾಡುವಂತಹ ರೀತಿಯಲ್ಲಿ ಹೇಳಿಕೆ ನೀಡಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದರು.

ಹಿಂದಿನ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್, ತಹಶೀಲ್ದಾರ್ ಸಿದ್ದೇಶ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ಆ ಸಮಯದಲ್ಲಿ ಹಾಜರಿದ್ದ ಅಧಿಕಾರಿ, ನೌಕರರು ತನಿಖಾ ಸಮಿತಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.